×
Ad

ಸುಸಜ್ಜಿತ ಬೀಚ್ ನಿರ್ಮಾಣ ಯೋಜನೆ ‘ತಲಪಾಡಿ’ ಆಯ್ಕೆ: ಡಾ. ಉದಯ ಶೆಟ್ಟಿ

Update: 2018-09-27 17:58 IST

ಮಂಗಳೂರು, ಸೆ.27: ಸ್ವದೇಶ ದರ್ಶನ್ ಕೋಸ್ಟಲ್ ಸರ್ಕಿಟ್ ಕಾರ್ಯಕ್ರಮದಡಿ ಸುಸಜ್ಜಿತ ಬೀಚ್ ನಿರ್ಮಾಣ ಯೋಜನೆ ‘ತಲಪಾಡಿ’ ಬೀಚ್ ಆಯ್ಕೆಯಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಉದಯ ಶೆಟ್ಟಿ ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಟೂರಿಸಂ ಆ್ಯಂಡ್ ಟ್ರಾವೆಲ್ ಮೆನೇಜ್‌ಮೆಂಟ್ ವಿಭಾಗ ಹಾಗೂ ಮಂಗಳೂರು ಪ್ರವಾಸೋದ್ಯಮ ಇಲಾಖೆಯ ಜಂಟಿ ಆಶ್ರಯದಲ್ಲಿ ಎಂಬಿಎ ಸಭಾಭವನದಲ್ಲಿ ಗುರುವಾರ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಂದಿನ ಐದು ವರ್ಷದೊಳಗೆ ವಿವಿಧ ಹಂತಗಳಲ್ಲಿ ತಲಪಾಡಿ ಬೀಚ್‌ಗೆ ಮೂಲಭೂತ ಸೌಲಭ್ಯ ಕಲ್ಪಿಸಿ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನ ಮಾಡಲಾಗುವುದು. ದೇಶ ವಿದೇಶಗಳಿಂದ ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಜಲಸಾಹಸ ಕ್ರೀಡೆಗಳನ್ನು ತಲಪಾಡಿ ಬೀಚ್‌ನಲ್ಲಿ ಆಯೋಜಿಸುವ ಚಿಂತನೆಯೂ ಇಲಾಖೆಯ ಮುಂದಿದೆ. ಬೀಚ್ ಅಭಿವೃದ್ಧಿಗಾಗಿ ಖಾಸಗಿ ಸಂಸ್ಥೆಗೆ ಟೆಂಡರ್ ಕೊಡಲಾಗಿದೆ. ಕಳೆದ 7 ವರ್ಷಗಳಿಂದ ಖಾಸಗಿ ಸಂಸ್ಥೆಗಳ ಜೊತೆಗೂಡಿ ಸಸಿಹಿತ್ಲು ಬೀಚ್‌ನಲ್ಲಿ ಮೂರು ದಿನಗಳ ಸರ್ಫಿಂಗ್ ಉತ್ಸವ ಆಯೋಜಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಸರ್ಪೀಂಗ್ ತಾಣವನ್ನಾಗಿ ರೂಪಿಸಲು 160 ಕೋ.ರೂ. ಅನುದಾನ ಮಂಜೂರು ಮಾಡುವಂತೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಡಾ.ಉದಯ ಶೆಟ್ಟಿ ಹೇಳಿದರು.

ಪ್ರವಾಸೋದ್ಯಮ ನೀತಿಯಡಿ ಪ್ರವಾಸಿಗರಿಗೆ ಅನುಕೂಲವಾಗುವ 20 ಯೋಜನೆಗಳಲ್ಲಿ ಬಂಡವಾಳ ಹೂಡಿಕೆದಾರರಿಗೆ ಇಲಾಖೆ ವತಿಯಿಂದ ಶೇ.20 ರಿಯಾಯಿತಿ ಸಿಗಲಿದೆ. ಪ್ರವಾಸಿ ಕೇಂದ್ರವಾಗಿರುವ ಮಂಗಳೂರು ಮಹಾನಗರ ಪಾಲಿಕೆ ಹಾಗೂ ಧರ್ಮಸ್ಥಳ ಗ್ರಾಪಂ ವ್ಯಾಪ್ತಿಯಲ್ಲಿ ಹೋಟೆಲ್, ಹೋಂ ಸ್ಟೇ, ರೆಸಾರ್ಟ್ ತೆರೆಯಲು ಅವಕಾಶವಿದ್ದು ಶೇ.40 ಸಬ್ಸಿಡಿಯಲ್ಲಿ ನೀಡಲಾಗುತ್ತಿದೆ ಎಂದು ಡಾ. ಉದಯ ಶೆಟ್ಟಿ ನುಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೆಟ್ ಏರ್‌ವೇಸ್ ಬೆಂಗಳೂರು ಮಾರಾಟ ವಿಭಾಗ ಮುಖ್ಯ ವ್ಯವಸ್ಥಾಪಕ ಹರೀಶ್ ಕೆ.ಶೆಣೈ ಭಾರತಕ್ಕೆ ಬರುವ ಶೇ.80ರಷ್ಟು ಪ್ರವಾಸಿಗರು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದರೆ ಇನ್ನುಳಿದವರು ಬೀಚ್ ವೀಕ್ಷಣೆ, ವಿಹಾರಕ್ಕೆ ಬರುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿ ಕಾಣುತ್ತಿರುವುದರಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದರು.

ಮಂಗಳೂರು ವಿವಿ ಕುಲಸಚಿವ ಡಾ.ಎ.ಎಂ.ಖಾನ್ ಮಾತನಾಡಿದರು. ಜೆಟ್ ಏರ್‌ವೇಸ್ ಬೆಂಗಳೂರು ವಿಭಾಗ ಮಾರಾಟ ವಿಭಾಗದ ಸಹಾಯಕ ವ್ಯವಸ್ಥಾಪಕ ವಿನೀತ್ ರಾಜೇಂದ್ರನ್ ಉಪಸ್ಥಿತರಿದ್ದರು. ಯಶಸ್ವಿ ಭಟ್ ಸ್ಪರ್ಧಾ ವಿಜೇತರ ಹೆಸರು ವಾಚಿಸಿದರು. ಉಪನ್ಯಾಸಕ ಶೇಖರ್ ನಾಯ್ಕಾ ವಂದಿಸಿದರು. ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News