ಲೋಕಸಂಪರ್ಕ ಅಭಿಯಾನವನ್ನು ಕೈಗೊಳ್ಳಲು ವಿಷ್ಣುನಾಥನ್ ಕರೆ
ಮಂಗಳೂರು, ಸೆ.27: ಕೇಂದ್ರದಲ್ಲಿ ರಫೇಲ್ ಮುಂತಾದ ಹಗರಣಗಳಲ್ಲಿ ನೇರವಾಗಿ ಭಾಗಿಯಾಗಿರುವ ನರೇಂದ್ರ ಮೋದಿ ಸರಕಾರವನ್ನು ತೊಲಗಿಸುವ ನಿಟ್ಟಿನಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರವನ್ನು ಮರುಸ್ಥಾಪಿಸುವುದನ್ನು ಗಮನದಲ್ಲಿಟ್ಟುಕೊಂಡು ಎಐಸಿಸಿ ನಿರ್ದೇಶನದಂತೆ ಲೋಕಸಂಪರ್ಕ ಅಭಿಯಾನವನ್ನು ಕೈಗೊಳ್ಳಲು ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್ ಕರೆ ನೀಡಿದರು.
ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಬುಧವಾರ ಜರುಗಿದ ವಿಶೇಷ ಸಭೆಯಲ್ಲಿ ಅವರು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅಕ್ಟೋಬರ್ 2ರಿಂದ ನವೆಂಬರ್ 19ರವರೆಗೆ ನಡೆಯುವ ಈ ಅಭಿಯಾನದಲ್ಲಿ ದೇಶ ರಕ್ಷಣೆಗಾಗಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಬೂತ್ ಮಟ್ಟದ ನಿಯೋಗಗಳ ನೇಮಕದ ಮೂಲಕ ಮನೆ ಭೇಟಿ ಕಾರ್ಯಕ್ರಮವನ್ನು ನಡೆಸಿ ಹಿಂದಿನ ಕಾಂಗ್ರೆಸ್ ಸರಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿ ಕೊಟ್ಟು ದೇಣಿಗೆ ಸಂಗ್ರಹಿಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಸುಧೀರ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಮಾಜಿ ಸಚಿವ ಬಿ. ರಮಾನಾಥ ರೈ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಮಾತನಾಡಿದರು.