ಎರ್ಮಾಳು: ಮೀನುಗಾರರ ಬಲೆಗೆ ಹೇರಳ ಮೀನು

Update: 2018-09-27 13:55 GMT

ಪಡುಬಿದ್ರೆ, ಸೆ. 27: ಸಮೀಪದ ಎರ್ಮಾಳು ತೆಂಕ ಮತ್ತು ಬಡಾ ಸಮುದ್ರ ಕಿನಾರೆಯಲ್ಲಿ ಗುರುವಾರ ವಿವಿಧ ಬಗೆಯ ಮೀನುಗಳು ಹೇರಳವಾಗಿ ಕಂಡು ಬಂದಿದ್ದು, ಮತ್ಸ್ಯ ಪ್ರಿಯರು ಎರ್ಮಾಗೆ ಆಗಮಿಸಿ ಮೀನುಗಳನ್ನು ಕೊಂಡೊಯ್ದರು.

ಪಂಡರಿನಾಥ ಕೈರಂಪಣಿಯವರು ತೆಂಕ ಎರ್ಮಾಳಿನಲ್ಲಿ ಬಲೆ ಹಾಕಿದ್ದು, ವೀರಾಂಜನೇಯ ಕೈರಂಪಣಿಯವರು ಬಡಾ ಎರ್ಮಾಳು ಕಡಲಲ್ಲಿ ಬಲೆ ಹಾಕಿದ್ದರು. ಕೈರಂಪಣಿ ಮೀನುಗಾರರು ಮೀನುಗಾರಿಕೆ ನಡೆಸುತಿದ್ದಾಗ ಎರಡೂ ರಂಪಣಿಗಳಿಗೆ ಹೇರಳ ಮೀನು ಲಭ್ಯವಾಗಿತ್ತು. ಮಾಂಜಿ, ಕೊಡ್ಡಾಯಿ, ಕಲ್ಲೂರು, ಬತ್ತ ಅಥವಾ ಕಡುವಾಯಿ, ಎರೆಬಾಯಿ, ಮಣಂಗು ಸಹಿತ ಇತರ ಹಲವು ಬಗೆಯ ಮೀನುಗಳು ಎರ್ಮಾಳು ಕಡಲ ತೀರದಲ್ಲಿ ರಾಶಿ ರಾಶಿಯಾಗಿ ದೊರಕಿವೆ. ಎರ್ಮಾಳಿನಲ್ಲಿ ಮೀನು ಸಿಕ್ಕದ ಸುದ್ದಿ ತಿಳಿದು ದೂರದೂರುಗಳಿಂದ ಜನರು ಆಗಮಿಸಿ ಮೀನುಗಳನ್ನು ಕೊಂಡೊಯ್ದರು.

ಈ ತಿಂಗಳ ಮೊದಲ ವಾರದಲ್ಲಿ ಹೆಜಮಾಡಿಯಲ್ಲಿ ಬೊಲೆಂಜಿರ್ ಮೀನು ಹೇರಳವಾಗಿ ದೊರಕಿತ್ತು. ಆ ಬಳಿಕ ಎರ್ಮಾಳಿನಿಂದ ಕಾಪುವರೆಗೂ ಮೀನುಗಳು ಸಿಕ್ಕಿತು. ಕಳೆದ ವಾರ ಮತ್ತೆ ಮುಲ್ಕಿಯ ಶಾಂಭವಿ ಹೊಳೆಯಲ್ಲಿ ಬೊಲೆಂಜಿರ್ ಮೀನು ಸಾಕಷ್ಟು ಸಿಕ್ಕಿತ್ತು. ಇದೀಗ ಎರ್ಮಾಳಿನಲ್ಲಿ ವಿವಿಧ ಬಗೆಯ ಮೀನು ಗಳು ಕಂಡುಬಂದಿದ್ದು, ಈ ಭಾಗದ ಜನರಿಗೆ ಮೀನಿನ ಸುಗ್ಗಿಯಾಗಿದೆ.

ವೈಜ್ಞಾನಿಕ ವರದಿಯ ಹಿನ್ನೆಲೆಯಲ್ಲಿ ಬುಲ್ ಟ್ರಾಲ್ ಮೀನುಗಾರಿಕೆಗೆ ಸರ್ಕಾರ ನಿಷೇಧ ಹೇರಿತ್ತು. ಇದರಿಂದ ಯಾವುದೇ ಬುಲ್ ಟ್ರಾಲ್ ಯಾಂತ್ರಿಕ ಬೋಟುಗಳು ತೀರ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿಲ್ಲ. ಈ ಕಾರಣದಿಂದ ಮೀನುಗಳು ತೀರ ಸಮುದ್ರಕ್ಕೆ ಸಲೀಸಾಗಿ ಸಾಗಿ ಬಂದಿದೆ ಎನ್ನುತ್ತಾರೆ ಮೀನುಗಾರರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News