×
Ad

ಬಸ್ ನಿರ್ವಾಹಕನಿಗೆ ಹಲ್ಲೆ ಪ್ರಕರಣ: ಅಪರಾಧಿಗೆ 20 ಸಾವಿರ ರೂ. ದಂಡ

Update: 2018-09-27 20:14 IST

ಮಂಗಳೂರು, ಸೆ. 27: ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕನಿಗೆ ಹಲ್ಲೆ ನಡೆಸಿದ್ದಲ್ಲದೆ, ಆತನ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಅಪರಾಧಿಗೆ 20ಸಾವಿರ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಫರಂಗಿಪೇಟೆ ಕುಂಜತ್ತಕಲ ನಿವಾಸಿ ಆರೋಪಿ ಆರೀಫ್ (27) ಶಿಕ್ಷೆಗೊಳಗಾದ ಅಪರಾಧಿ.

ಹರಿಯಪ್ಪ ನಾಯ್ಕ ಎಂಬವರು ಕೆಎಸ್ಸಾರ್ಟಿಸಿ ನಿರ್ವಾಹಕರಾಗಿದ್ದು, ಹರೀಶ್ ಬಸ್ ಚಾಲಕರಾಗಿದ್ದಾರೆ. ಬಸ್ ಬಿ.ಸಿ.ರೋಡ್ ಕಡೆಯಿಂದ ಮಂಗಳೂರಿನತ್ತ ಬರುತ್ತಿರುವಾಗ ಮಾರಿಪಳ್ಳದಲ್ಲಿ ಆರೀಫ್ ಮತ್ತು ಮಹಮ್ಮದ್ ಶರೀಫ್ ಬಸ್ ಹತ್ತಿದರು. ಈ ಸಂದರ್ಭ ಬಸ್‌ನ ನಿರ್ವಾಹಕರು ಟಿಕೆಟ್‌ನ್ನು ತೆಗೆಯಲು ಸೂಚಿಸಿದಾಗ, ಆರೋಪಿಗಳು ನಿರಾಕರಿಸಿದ್ದಲ್ಲದೆ, ನಿರ್ವಾಹಕರ ಶರ್ಟ್ ಕಾಲರ್ ಹಿಡಿದು ಹಲ್ಲೆ ನಡೆಸಿದ್ದರು.

ಬಳಿಕ ಶರೀಫ್ ಬ್ಯಾಗ್‌ನಲ್ಲಿದ್ದ ಚೂರಿ ತೆಗೆದು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದು, ಇದನ್ನು ಕಂಡ ಬಸ್‌ನ ಚಾಲಕ ಹರೀಶ್ ಅವರು ಹರಿಯಪ್ಪ ನಾಯ್ಕಾನನ್ನು ತಡೆಯಲು ಬಂದಿದ್ದು, ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಹರಿಯಪ್ಪ ನಾಯ್ಕಾ ಕುತ್ತಿಗೆಯಲ್ಲಿದ್ದ 32ಗ್ರಾಂ ಚಿನ್ನದ ಚೈನನ್ನು ಎಳೆದಿದ್ದಲ್ಲದೆ, ಅವರಲ್ಲಿದ್ದ ನಗದು ಎಳೆದುಕೊಂಡು ಪರಾರಿಯಾಗಿದ್ದಾರೆ ಎಂದು ದೂರಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ನ್ಯಾಯಾಲಯದ ನ್ಯಾಯಾಧೀಶ ಕಡ್ಲೂರು ಸತ್ಯ ನಾರಾಯಣಾಚಾರ್ಯ 10 ಮಂದಿ ಸಾಕ್ಷಿದಾರರ ವಿಚಾರಣೆ ನಡೆಸಿ ಇತ್ತಂಡಗಳ ವಾದವನ್ನು ಆಲಿಸಿ  ಆರೋಪ ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ.

ಬಸ್ ನಿರ್ವಾಹಕನ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಐಪಿಸಿ 353ರಡಿ ತಪ್ಪಿತಸ್ಥನೆಂದು ತೀರ್ಮಾನಿಸಿ 20ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1 ತಿಂಗಳ ಸಾದಾ ಶಿಕ್ಷೆ ವಿಧಿಸಿದ್ದಾರೆ. ಉಳಿದಂತೆ ಆರೋಪಿಯನ್ನು ಐಪಿಸಿ 504, 323, 397ರಡಿ ಖುಲಾಸೆಗೊಳಿಸಿದ್ದಾರೆ. ದಂಡದ ಮೊತ್ತದಲ್ಲಿ 10 ಸಾವಿರ ರೂ.ಅನ್ನು ಗಾಯಾಳು ಬಸ್ ನಿರ್ವಾಹಕರಿಗೆ ಪರಿಹಾರವಾಗಿ ನೀಡಲು ಆದೇಶಿಸಲಾಗಿದೆ.

ಇನ್ನೊಬ್ಬ ಆರೋಪಿ ನಾಪತ್ತೆ: ಪ್ರಕರಣದಲ್ಲಿ ಇನ್ನೊಬ್ಬ ಆರೋಪಿ ಮಹಮ್ಮದ್  ಶರೀಫ್ ತಲೆಮರೆಸಿಕೊಂಡಿದ್ದು, ಆತನ ವಿಚಾರಣೆ ಇನ್ನೂ ಬಾಕಿಯಿದೆ.

ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕುದ್ರಿಯ ಪುಷ್ಪರಾಜ್ ಅಡ್ಯಂತಾಯ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News