×
Ad

ನರೇಗಾ ಯೋಜನೆಯಡಿ ನಕಲಿ ಕಟ್ಟಡ ಕಾರ್ಮಿಕರ ನೊಂದಣಿ: ಸಿಐಟಿಯು ಆರೋಪ

Update: 2018-09-27 20:46 IST

ಭಟ್ಕಳ, ಸೆ. 27: ನರೇಗಾ ಯೋಜನೆಯಡಿಯಲ್ಲಿ ರಾಜ್ಯದಾದ್ಯಂತ ನಕಲಿ ಕಟ್ಟಡ ಕಾರ್ಮಿಕರ ನೋಂದಣಿಯಾಗುತ್ತಿದ್ದು ಸರಕಾರದ ಹಣ ಪೋಲು ಮಾಡುವ ಕೃತ್ಯ ಸರಾಗವಾಗಿ ನಡೆಯುತ್ತಿದೆ ಎಂದು ಸಿ.ಐ.ಟಿ.ಯು. ಜಿಲ್ಲಾ ಸಮಿತಿ ಪ್ರಮುಖ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಅಧ್ಯಕ್ಷ ಜಿ.ಎನ್. ರೇವಣಕರ್ ಆರೋಪಿಸಿದ್ದಾರೆ.

ರಾಜ್ಯದಾದ್ಯಂತ ನರೇಗಾ ಯೋಜನೆಯಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅರ್ಹ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರನ್ನು ಮಂಡಳಿಯ ಫಲಾನುಭವಿಗಳಾಗಿ ನೋಂದಾಯಿಸಲು ಅಭಿಯಾನ ಆರಂಭವಾಗಿದ್ದು ಅಭಿಯಾನದ ಆರಂಭದಲ್ಲಿಯೇ ಗೋಲ್ ಮಾಲ್ ಆಗುವ ಮೂಲಕ ಸರಕಾರಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಲಿದೆ ಎಂದು ಭವಿಷ್ಯ ನುಡಿದರು.

ರಾಜ್ಯದಲ್ಲಿ ನರೇಗಾ ಯೋಜನೆಯಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರನ್ನು ಮಂಡಳಿಯ ಫಲಾನುಭವಿಗಳಾಗಿ ನೋಂದಾಯಿಸುವಲ್ಲಿ ಐಕ್ಯ ಬ್ಯುಸಿನೆಸ್ ಸೊಲ್ಯೂಶನ್ಸ್ ಲಿ., ಎಡವಿದ್ದು ಇಲ್ಲಿ ಕಾರ್ಮಿಕರೇ ಅಲ್ಲದವರು ನೋಂದಣಿಯನ್ನು ಮಾಡುತ್ತಿದ್ದಾರೆ. ಕಟ್ಟಡ ಕಾರ್ಮಿಕರ ಕಾರ್ಡ ದೊರೆತ ತಕ್ಷಣ ಅವರು ಸರಕಾರದ ಸಾವಿರಾರು ರೂಪಾಯಿಗಳ ಸೌಲಭ್ಯ ಪಡೆದುಕೊಂಡು ನೈಜ ಕಟ್ಟಡ ಕಾರ್ಮಿಕರಿಗೆ ಅನ್ಯಾಯವಾಗಲಿದೆ ಎಂದರು.

ನರೇಗಾ ಯೋಜನೆಯಡಿಯಲ್ಲಿ ಕೆಲಸ ನಿರ್ವಹಿಸುವವರು 90 ದಿನಗಳ ಕಾಲ ಕೆಲಸ ನಿರ್ವಹಿಸಿರಬೇಕಾಗುತ್ತದೆ. ಅಲ್ಲದೇ 60 ದಿನಗಳ ಕಾಲ ಕೆಲಸ ನಿರ್ವಹಿಸಿದವರಿಗೆ ವಿನಾಯಿತಿ ನೀಡಲಾಗಿದ್ದರೂ ಸಹ ಅವರು ಕೆಲಸ ನಿರ್ವಹಿಸಿದ ಕುರಿತು ಆಯಾಯ ಗ್ರಾಮ ಪಂಚಾಯತ್ ಪಿ.ಡಿ.ಓ. ಅವರೇ ದೃಢೀಕರಿಸಬೇಕು. ಅವರು ಕಾರ್ಮಿಕರಾಗಿ ಕೆಲಸ ಮಾಡಿದ ಬಗ್ಗೆ ಅವರ ಬ್ಯಾಂಕ್ ಪಾಸ್ ಪುಸ್ತಕರ ದೃಢೀಕೃತ ನಕಲನ್ನು ಸಹ ಪಡೆಯಬೇಕಾಗುತ್ತದೆ. ಆದರೆಇದ್ಯಾವುದನ್ನು ನೋಡದೇ ನಿಯಮವನ್ನು ಗಾಳಿಗೆ ತೂರಿ ಕಾರ್ಯ ಮಾಡುತ್ತಿರುವುದು ಸರಕಾರಕ್ಕೆ ಮಾಡಿದ ಮೋಸ ಎಂದರು.

ಎಲ್ಲಿಯೋ ಹುಬ್ಬಳ್ಳಿಯಲ್ಲಿ ಕುಳಿತು ಇವರು ಕಟ್ಟಡ ಮತ್ತು ಇತರೇ ಕಾರ್ಮಿಕರು ಎಂದು ಪ್ರಮಾಣ ಪತ್ರ ನೀಡುತ್ತಿದ್ದು ಅದು ಎಷ್ಟು ಸರಿ ಎನ್ನುವುದು ಪ್ರಶ್ನೆಯಾಗಿದೆ.  ನರೇಗಾ ಯೋಜನೆಯಡಿಯಲ್ಲಿ ನೋಂದಣೀಯಾಗಬೇಕಾದಲ್ಲಿ ಅವರಿಗೆ ಪಿ.ಡಿ.ಓ. ದೃಢೀಕರಣ ನೀಡಬೇಕು ಬ್ಯಾಂಕ್ ಖಾತೆಯಲ್ಲಿ ಹಣ ಜಮಾ ಆದ ಬಗ್ಗೆ ಕೂಡಾ ದಾಖಲೆಯನ್ನು ಪಡೆಯಬೇಕು ಎಂದರು.

ಪ್ರತಿ ತಾಲೂಕಿನಲ್ಲಿಯೂ ಕೂಡಾ 10 ಸಾವಿರಕ್ಕೂ ಹೆಚ್ಚು ಜನರು ನೋಂದಣಿಗಾಗಿ ಕಾಯುತ್ತಿದ್ದು ಇವರೆಲ್ಲಿಯ ಕಟ್ಟಡ ಕಾರ್ಮಿಕರು ಎನ್ನುವುದು ತಿಳಿಯುತ್ತಿಲ್ಲವಾಗಿದೆ. ಇಂತಹ ದೊಡ್ಡ ಪ್ರಮಾಣದಲ್ಲಿ ಕಟ್ಟಡ ಕಾರ್ಮಿಕರು ಒಂದು ತಾಲೂಕಿನಲ್ಲಿರಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು ಭಟ್ಕಳ ವೊಂದರಲ್ಲಿಯೇ ಇಲ್ಲಿಯ ತನಕ 7 ಸಾವಿರ ಜನರು ನೋಂದಣಿ ಮಾಡಿದ್ದು ಇನ್ನೂ 3 ಸಾವಿರ ಜನರು ನೋಂದಣಿ ಮಾಡಲಿದ್ದಾರೆ ಎಂದೂ ಹೇಳಿದ ಅವರು ತಕ್ಷಣ ಈ ಕ್ರಮವನ್ನು ಕೈಬಿಟ್ಟು ಅರ್ಹರಿಗೆ ಮಾತ್ರ ನೋಂದಣಿಗೆ ಅವಕಾಶ ಮಾಡಿಕೊಡಬೇಕು ಎಂದೂ ಆಗ್ರಹಿಸಿದರು. 

ಸಿ.ಐ.ಟಿ.ಯು. ಭಟ್ಕಳ ಸಂಘದ ಅಧ್ಯಕ್ಷ ಪುಂಡಲೀಕ ನಾಯ್ಕ ಮಾತನಾಡಿ ಇದು ಸರಕಾರಕ್ಕೆ ಮಾಡುತ್ತಿರುವ ಮೋಸ ಆಗಿದ್ದು ಪ್ರತಿಯೋರ್ವ ನರೇಗಾ ಕಾರ್ಮಿಕನನ್ನು ನೋಂದಾಯಿಸಿಕೊಳ್ಳಲು ಗ್ರಾಮ ಪಂ. ಪಿ.ಡಿ.ಒ. ಪ್ರಮಾಣ ಪತ್ರ ಕಡ್ಡಾಯವಾಗಿದ್ದು ಅವರ ಬ್ಯಾಂಕ್ ಪಾಸ್‍ಬುಕ್ ವೆರಿಫಿಕೇಶನ್ ಮುಖ್ಯವಾದದು ಎಂದರು. ತಾಲೂಕಾ ಕಾರ್ಯದರ್ಶಿ ಶ್ರೀಧರ ನಾಯ್ಕ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News