×
Ad

ಮಕ್ಕಳಿಗೆ ವಿಷ ಉಣಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ತಾಯಿ

Update: 2018-09-27 22:29 IST

ಹಿರಿಯಡ್ಕ, ಸೆ. 27: ತಾಯಿ ತನ್ನ ಇಬ್ಬರು ಮಕ್ಕಳಿಗೆ ವಿಷ ಉಣಿಸಿ ಕೊಲೆಗೆ ಯತ್ನಿಸಿದಲ್ಲದೆ, ಬಳಿಕ ತಾನೂ ಕೂಡ ವಿಷ ಸೇವಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿ ರುವ ಘಟನೆ ಕಣಜಾರು ಗ್ರಾಮದ ಪೆಲತ್ತೂರು ಗೆಟ್ಟಿ ಗುಡ್ಡೆಯಂಗಡಿ ಎಂಬಲ್ಲಿ ಸೆ.26ರಂದು ಸಂಜೆ ನಡೆದಿದೆ.

ವಿಷ ಸೇವನೆಯಿಂದ ಅಸ್ವಸ್ಥಗೊಂಡಿರುವ ಗುಡ್ಡೆಯಂಗಡಿಯ ಸಂತೋಷ್ ಎಂಬವರ ಪತ್ನಿ ಅಕ್ಷತಾ (30) ಹಾಗೂ ಇಬ್ಬರು ಗಂಡು ಮಕ್ಕಳಾದ ತೃಪ್ತಿನ್ (6) ಹಾಗೂ ದಿಯಾನ್ (1) ಎಂಬವರು ಮಣಿಪಾಲ ಆಸ್ಪತ್ಪೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ದಿಯಾನ್ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೈಯಕ್ತಿಕ ಕಾರಣದಿಂದ ಮನನೊಂದ ಅಕ್ಷತಾ, ತನ್ನ ಮಕ್ಕಳಿಗೆ ವಿಷ ಕುಡಿಸಿ ಕೊಲೆಗೆ ಪ್ರಯತ್ನಿಸಿ ಬಳಿಕ ತಾನೂ ವಿಷವನ್ನು ಕುಡಿದು ಆತ್ಮಹತ್ಯೆ ಮಾಡಿ ಕೊಳ್ಳಲು ಪ್ರಯತ್ನಿಸಿದರು. ಮನೆಯಿಂದ ಹೊರಗೆ ಬಂದ ಅಕ್ಷತಾ ತಾನು ವಿಷ ಕುಡಿದು ಮಕ್ಕಳಿಗೂ ಕುಡಿಸಿರುವುದಾಗಿ ನೆರೆಮನೆಯವರಲ್ಲಿ ಹೇಳಿದರು. ತೀವ್ರವಾಗಿ ಅಸ್ವಸ್ಥಗೊಂಡ ಮೂವರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ತಿಳಿದುಬಂದಿದೆ.

ಅಕ್ಷತಾ ಮನೆಯ ಗೋಡೆಯ ಮೇಲೆ ‘ನನ್ನ ಸಾವಿಗೆ ನಾನೇ ಕಾರಣ. ನನ್ನ ಮಕ್ಕಳು ತಬ್ಬಲಿಯಾಗಬಾರದೆಂದು ನಾನೇ ಕರೆದು ಕೊಂಡು ಹೋಗುತ್ತಿದ್ದೇನೆ’ ಎಂದು ಬರೆದಿದ್ದಾರೆ. ಇವರ ಗಂಡ ಸಂತೋಷ್ ಪೂನಾದಲ್ಲಿ ಕೆಲಸ ಮಾಡುತ್ತಿದ್ದು, ಏಳು ವರ್ಷಗಳ ಹಿಂದೆ ಇವರು ವಿವಾಹವಾಗಿದ್ದರು. ಆತ್ಮಹತ್ಯೆ ಯತ್ನಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News