×
Ad

ಮಲ್ಪೆ ಬೀಚ್‌ನಲ್ಲಿ ವೈನ್ ಉತ್ಸವ: 200 ಬ್ರಾಂಡ್‌ಗಳ ಪ್ರದರ್ಶನ

Update: 2018-09-28 17:48 IST

ಮಲ್ಪೆ, ಸೆ. 28: ಉಡುಪಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಮಲ್ಪೆ ಅಭಿವೃದ್ಧಿ ಸಮಿತಿ ಹಾಗೂ ಇತರ ಇಲಾಖೆಗಳ ಸಹಯೋಗದಲ್ಲಿ ಮಲ್ಪೆ ಬೀಚ್ ನಲ್ಲಿ ಪರ್ಯಟನ ಪರ್ವ ಪ್ರಯುಕ್ತ ನಾಲ್ಕು ದಿನಗಳ ಕಾಲ ಹಮ್ಮಿಕೊಳ್ಳಲಾದ ದ್ರಾಕ್ಷಾರಸ ಉತ್ಸವ (ವೈನ್ ಉತ್ಸವ)ಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಸೆ.30ವರೆಗೆ ಪ್ರತಿದಿನ ಸಂಜೆ 6:30ರಿಂದ ರಾತ್ರಿ 10:30 ವರೆಗೆ ನಡೆಯುವ ಈ ಉತ್ಸವದಲ್ಲಿ ಒಂಭತ್ತು ಪ್ರಮುಖ ವೈನ್ ಸಂಸ್ಥೆಗಳ 200 ಬ್ರಾಂಡ್‌ಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇರಿಸಲಾಗಿದೆ. 100 ರೂ.ನಿಂದ 1500 ರೂ. ವರೆಗಿನ ರೆಡ್, ವೈಟ್, ರೊಸೆ, ಸ್ಪಾಕ್ಲಿಂಗ್ ಬಗೆಯ ವೈನ್‌ಗಳು ಇಲ್ಲಿವೆ. ಕಾಡು ಎಂಬ ವೈನ್‌ನ ಒಂದು ಬಾಟಲಿಯ ಮಾರಾಟದಲ್ಲಿ ಬಂದ ಹಣದಲ್ಲಿ 5ರೂ. ವನ್ನು ಹುಲಿ ಹಾಗೂ ಅರಣ್ಯ ಸಂರಕ್ಷಣೆಗಾಗಿ ರಾಜ್ಯ ಸರಕಾರಕ್ಕೆ ನೀಡಲಾಗುತ್ತದೆ.

ವೈನ್ ಉತ್ಸವಕ್ಕೆ ಪ್ರಥಮ ದಿನ ಉತ್ತಮ ಸ್ಪಂದನೆ ದೊರೆತಿದ್ದು, ಈ ಹಿಂದೆ ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾದ ವೈನ್ ಉತ್ಸವ ಯಶಸ್ವಿಯಾಗಿತ್ತು. ರಾಜ್ಯದ ಮತ್ತು ಮಹಾರಾಷ್ಟ್ರದ 9 ಸಂಸ್ಥೆಗಳು ಮೇಳದಲ್ಲಿ ಭಾಗವಹಿಸಿವೆ ಎಂದು ರಾಜ್ಯ ವೈನ್ ಬೋರ್ಡ್‌ನ ಪ್ರಧಾನ ವ್ಯವಸ್ಥಾಪಕ ಸರ್ವೇಶ್ ಕುಮಾರ್ ತಿಳಿಸಿದ್ದಾರೆ.

ವೈನ್‌ಗೆ ಕೃತಕ ಆಲ್ಕೊಹಾಲ್ ಅಂಶಗಳನ್ನು ಬೆರೆಸಲಾಗುವುದಿಲ್ಲ. ನೈಸರ್ಗಿಕ ವಾಗಿ ದ್ರಾಕ್ಷಿಯಲ್ಲಿರುವ ಸಕ್ಕರೆ ಅಂಶದಷ್ಟು ಅಧರ್ ಪ್ರಮಾಣ ಆಲ್ಕೊಹಾಲ್ ಅಂಶವಿರುತ್ತದೆ. ವೈನ್ ಮಿತ ಸೇವನೆ ಆರೋಗ್ಯಕ್ಕೆ ಉತ್ತಮ. ಇದರಿಂದ ಹೃದಯ, ಶ್ವಾಸಕೋಶ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News