×
Ad

ವಾರದೊಳಗೆ ಆದೇಶ ಪಾಲನೆ: ಅನುಷ್ಠಾನಾಧಿಕಾರಿಯ ನೇಮಕ

Update: 2018-09-28 17:49 IST

ಉಡುಪಿ, ಸೆ. 28: ಹಿರಿಯ ನಾಗರಿಕರ ನ್ಯಾಯ ಮಂಡಳಿಯಿಂದ ಆದೇಶ ಪಡೆದ ಒಂದು ವಾರದೊಳಗಾಗಿ ಆದೇಶದ ಪಾಲನೆಯಾಗಬೇಕೆಂದು ಉಡುಪಿ ಜಿಲ್ಲಾಡಳಿತ ಸ್ಪಷ್ಟ ನಿರ್ದೇಶನ ನೀಡಿದ್ದು, ಇದರ ಅನುಷ್ಠಾನಕ್ಕಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿ ನಿರಂಜನ್ ಭಟ್ ಅವರನ್ನು ನೇಮಕ ಮಾಡಲಾಗಿದೆ.

ಉಡುಪಿ ವೈಕುಂಠ ಬಾಳಿಗಾ ಕಾನೂನು ವಿದ್ಯಾಲಯದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಉಡುಪಿ ಮಾನವಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶ್ಯಾನುಬಾಗ್ ಈ ವಿಚಾರ ತಿಳಿಸಿದರು. ಆದೇಶ ಪಡೆದ ಎರಡೆ ದಿನಗಳೊಳಗೆ ಖಾತಾ ಬದಲಾವಣೆ ಮಾಡಿಕೊಡುವುದಾಗಿ ನಗರ ಸಭೆ ಹಾಗೂ ಗ್ರಾಪಂ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಈ ಮೂಲಕ ಉಡುಪಿ ಜಿಲ್ಲಾಡಳಿತವು ಇಡೀ ರಾಜ್ಯಕ್ಕೆ ಮಾದರಿಯಾಗುವಂತಹ ಕಾರ್ಯವಿಧಾನವನ್ನು ರೂಪಿಸಿ ಅನ್ಯಾಯಕ್ಕೊಳಗಾಗಿರುವ ಹಿರಿಯ ನಾಗರಿಕರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದೆ ಎಂದರು.

ಆಸ್ತಿ ಲಪಾಟಿಸುವ ಮೂಲಕ ಮಕ್ಕಳಿಂದ ವಂಚನೆಗೆ ಒಳಗಾದ ಉಡುಪಿ ಜಿಲ್ಲೆಯ ಕಿರ್ಕಾಲು ಗ್ರಾಮದ ಫ್ಲೋರಿನ್ ಕ್ಯಾಸ್ತಲಿನೋ(74) ಹಾಗೂ ಉಡುಪಿ ತಾಲೂಕಿನ ಕೆಂಜೂರು ಗ್ರಾಮದ ರಾಜೀವಿ ಶೆಡ್ತಿ ಎಂಬವರು ಹಿರಿಯ ನಾಗರಿಕರ ನ್ಯಾಯ ನಿರ್ವಹಣಾ ಮಂಡಳಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ನ್ಯಾಯಮಂಡಳಿಯು ಮೇ ತಿಂಗಳಲ್ಲಿ ಜಮೀನು ಹಾಗೂ ಮನೆ ವರ್ಗಾವಣೆಯ ವ್ಯವಸ್ಥಾಪತ್ರವನ್ನು ರದ್ದುಗೊಳಿಸಿ ಈ ಕುರಿತು ನೊಂದಣಿ ದಾಖಲೆಗಳಲ್ಲಿ ಸೂಕ್ತ ತಿ್ದುಪಡಿ ಮಾಡುವಂತೆ ಆದೇಶಿಸಿತ್ತು.

ಈ ಎರಡೂ ಪ್ರಕರಣಗಳಲ್ಲಿ ನ್ಯಾಯಮಂಡಳಿಯ ಆದೇಶ ಪಾಲನೆಯಾಗ ದಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿತ್ತು. ಈ ಸಂಬಂಧ ಸೆ.18 ರಂದು ಜಿಲ್ಲಾಧಿಕಾರಿ ಸಭೆ ಕರೆದಿದ್ದರು. ಈ ಸಭೆಯಲ್ಲಿ ಇನ್ನು ಮುಂದೆ ಆದೇಶ ಪಡೆದ ಒಂದು ವಾರದೊಳಗಾಗಿ ಆದೇಶದ ಪಾಲನೆಯಾಗಬೇಕೆಂದು ಜಿಲ್ಲಾಧಿ ಕಾರಿ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ಆದೇಶದ ಬಳಿಕ ಹಿರಿಯ ನಾಗರಿಕರು ದಾಸ್ತಾವೇಜು ರದ್ದತಿಗಾಗಿ ಹಲವು ಬಾರಿ ಕಚೇರಿಗಳಿಗೆ ಅಲೆದಾಡುವ ವಿಚಾರವನ್ನು ಗಮನಿಸಿದ ಜಿಲ್ಲಾಧಿಕಾರಿ, ಅದಕ್ಕಾಗಿ ಅನುಷ್ಠಾನಾಧಿಕಾರಿಯನ್ನು ನೇಮಕ ಮಾಡಿದ್ದಾರೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜೀವಿ ಶೆಡ್ತಿಯ ಪತಿ ಸಂಜೀವ ಶೆಟ್ಟಿ ಹಾಜರಿದ್ದರು.

ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲ

ಉಡುಪಿ ಜಿಲ್ಲಾಧಿಕಾರಿ ನ್ಯಾಯ ಮಂಡಳಿಯ ಆದೇಶ ಅನುಷ್ಠಾನಕ್ಕಾಗಿ ಅಧಿಕಾರಿಯನ್ನು ನೇಮಕ ಮಾಡಿರುವುದರಿಂದ ಇನ್ನು ಮುಂದೆ ಆದೇಶ ಪಡೆದ ಹಿರಿಯ ನಾಗರಿಕರು ಕಚೇರಿಯಿಂದ ಕಚೇರಿಗೆ ಅಲೆದಾಡುವ ಅಗತ್ಯವೇ ಇರು ವುದಿಲ್ಲ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶ್ಯಾನುಬಾಗ್ ತಿಳಿಸಿದ್ದಾರೆ.

ನ್ಯಾಯಮಂಡಳಿ ಆದೇಶ ನೀಡಿದ ಕೂಡಲೇ ನೇರವಾಗಿ ಅನುಷ್ಠಾನಾಧಿಕಾರಿ ಯನ್ನು ಸಂಪರ್ಕಿಸಿದರೆ, ಅವರು ಪೊಲೀಸ್ ಇಲಾಖೆ, ಸಬ್‌ರಿಜಿಸ್ಟ್ರಾರ್ ಕಛೇರಿ, ಕಂದಾಯ ಇಲಾಖೆ, ನಗರಸಭೆ ಮುಂತಾದ ಅಧಿಕಾರಿಗಳನ್ನು ಸಂಪರ್ಕಿಸಿ ಆದೇಶದ ಅನುಷ್ಠಾನಕ್ಕೆ ಸಹಕರಿಸಲಿದ್ದಾರೆ. ಜಿಲ್ಲಾಡಳಿತದ ನೀರ್ದೇಶದಂತೆ ವಾರದೊಳಗೆ ಸಬ್‌ರಿಜಿಸ್ಟ್ರಾರ್ ನೋಂದಣಿ ದಾಖಲಾತಿಗಳನ್ನು ರದ್ದುಪಡಿಸಿ, ಪೋಲಿಸ್, ನಗರಸಭೆ ಅಥವಾ ಗ್ರಾಪಂ ಅಧಿಕಾರಿಗಳು ಮೂರು ದಿನಗಳೊಳಗೆ ಆದೇಶವನ್ನು ಅನುಷ್ಠಾನಗೊಳಿಸಬೇಕಾಗುತ್ತದೆ. ಈ ವ್ಯವಸ್ಥೆಯನ್ನು ಕೂಡಲೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅನುಸರಿಸಬೇಕೆಂದು ಪ್ರತಿಷ್ಠಾನವು ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ಈಗಾಗಲೇ ಆಗ್ರಹ ಪತ್ರಗಳನ್ನು ಸಲ್ಲಿಸಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News