ಸೆ.30: ಬಿ.ಸಿ.ರೋಡಿನಲ್ಲಿ ಸಂವಿಧಾನ ಆಂದೋಲನ-ಉಪನ್ಯಾಸ ಕಾರ್ಯಕ್ರಮ
ಬಂಟ್ವಾಳ, ಸೆ. 28: ಮಾನವ ಬಂಧುತ್ವ ವೇದಿಕೆ ಕರ್ನಾಟಕದ ಬಂಟ್ವಾಳ ತಾಲೂಕು ಸಮಿತಿ ಹಾಗೂ ಸಂವಿಧಾನ ಆಂದೋಲನ ಸ್ವಾಗತ ಸಮಿತಿ ಬಂಟ್ವಾಳ ತಾಲೂಕು ಆಶ್ರಯದಲ್ಲಿ ಸೆ. 30ರಂದು "ಸಂವಿಧಾನ ಆಂದೋಲನ" ಹಾಗೂ ಮೂರು ವಿಶೇಷ ಉಪನ್ಯಾಸ ಕಾರ್ಯಕ್ರಮ ಬಿ.ಸಿ.ರೋಡಿನ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆಯಲಿದೆ ಎಂದು ಮಾನವ ಬಂಧುತ್ವ ವೇದಿಕೆ ಕರ್ನಾಟಕದ ಬಂಟ್ವಾಳ ತಾಲೂಕು ಸಮಿತಿ ಸಂಚಾಲಕ ಎ.ಗೋಪಾಲ ಅಂಚನ್ ಹಾಗೂ ಸಂವಿಧಾನ ಆಂದೋಲನ ಸ್ವಾಗತ ಸಮಿತಿ ಬಂಟ್ವಾಳ ತಾಲೂಕು ಅಧ್ಯಕ್ಷ ವಿಜಯಕುಮಾರ್ ಎಸ್. ಕಡೇಶಿವಾಲಯ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 10ಗಂಟೆಗೆ ಹಿಂದುಳಿದ ವರ್ಗಗಳ ಲೀಗ್ ಸ್ಥಾಪಕ ಜಯಾನಂದ ದೇವಾಡಿಗ ಸಂವಿಧಾನ ಆಂದೋಲನ ಉದ್ಘಾಟಿಸುವರು. ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ವಿಲ್ಫ್ರೆಡ್ ಡಿಸೋಜ ಅಧ್ಯಕ್ಷತೆ ವಹಿಸುವರು.
ಸಿಐಟಿಯು ರಾಜ್ಯ ಉಪಾಧ್ಯಕ್ಷ ಕೆ.ಪ್ರಕಾಶ್ "ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಸ್ಥಿತಿ", ನಿವೃತ್ತ ಪೋಲೀಸ್ ಉಪ ಆಯುಕ್ತ ಬಿ.ಕೆ.ಶಿವರಾಮ್ "ಜಾತಿ ವ್ಯವಸ್ಥೆಯ ಅಮಾನವೀಯತೆ ಮತ್ತು ಶ್ರೀ ನಾರಾಯಣ ಗುರುಗಳ ಹೋರಾಟ", ಹೈಕೋರ್ಟ್ ವಕೀಲ ಅನಂತ ನಾಯಕ್ "ಭಾರತದ ಸಂವಿಧಾನ ಮತ್ತು ಸಾಮಾಜಿಕ ನ್ಯಾಯ" ವಿಚಾರದಲ್ಲಿ ವಿಶೇಷ ಉಪನ್ಯಾಸ ನೀಡುವರು. ಲೇಖಕ ಡಾ.ಕೇಶವ ಎಲ್.ಧರಣಿ ಮತ್ತು ವಕೀಲ ಕುಂಞಿ ಅಬ್ಬುಲ್ಲಾ ಪ್ರತಿಕ್ರಿಯೆ ನೀಡುವರು.
ಚಲನಚಿತ್ರ ನಟ, ನಿರ್ಮಾಪಕ ಡಾ. ರಾಜಶೇಖರ ಕೋಟ್ಯಾನ್, ಲೇಖಕಿ ಬಿ.ಎಂ.ರೋಹಿಣಿ, ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್, ವಲಯ ಸಂಚಾಲಕ ಕೆ.ಎಸ್.ಸತೀಶ್ ಕುಮಾರ್ ಅತಿಥಿಗಳಾಗಿ ಭಾಗವಹಿಸುವರು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.