ಮಂಗಳೂರು ಎ ಹೋಬಳಿ ಗ್ರಾಮಗಳ ಪಿಂಚಣಿ ಅದಾಲತ್
ಮಂಗಳೂರು, ಸೆ.28: ಕಂದಾಯ ಇಲಾಖೆಯಿಂದ ಮಂಗಳೂರು ‘ಎ’ ಹೋಬಳಿ ಗ್ರಾಮಗಳ ಪಿಂಚಣಿ ಅದಾಲತ್ ಹಂಪನಕಟ್ಟೆ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಸಂಕಷ್ಟದಲ್ಲಿರುವ ಜನರ ಶೀಘ್ರ ಸ್ಪಂದನೆಗೆ ಅದಾಲತ್ ಆಯೋಜಿಸಲಾಗಿದೆ. ಒಂದು ವೇದಿಕೆಯಲ್ಲಿ ಅಧಿಕಾರಿಗಳ ಸಮಕ್ಷಮ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಅದಾಲತ್ ಸಹಕಾರಿ. ಅಧಿಕಾರಿಗಳು ಆರ್ಥಿಕವಾಗಿ ಹಿಂದುಳಿದವರ ಬಗ್ಗೆ ನಿತ್ಯ ಕಾಳಜಿ ವಹಿಸಬೇಕು. ನೊಂದವರ ಕಣ್ಣೀರು ಒರೆಸುವ ಕಾರ್ಯ ನಡೆಸಬೇಕು ಎಂದರು.
ಮೇಯರ್ ಭಾಸ್ಕರ ಕೆ. ಮಾತನಾಡಿ, ಜನರು ಸರ್ಕಾರದ ಸವಲತ್ತುಗಳನ್ನು ಸದುಪಯೋಗಿಸಬೇಕು. ಜನಪ್ರತಿನಿಧಿಗಳ ಜತೆ ಅಧಿಕಾರಿ ವರ್ಗ ಜತೆಯಾಗಿ ನಡೆದಾಗ ಸಮಸ್ಯೆಗಳಿಗೆ ಸ್ಪಂದಿಸುವುದು ಸುಲಭವಾಗುತ್ತದೆ.
ತಹಶೀಲ್ದಾರ್ ಗುರುಪ್ರಸಾದ್ ಮಾತನಾಡಿ, ಸರ್ಕಾರ ಆರ್ಥಿಕವಾಗಿ ಹಿಂದುಳಿದವರ ಅಭ್ಯುದಯಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು ಇವುಗಳು ಸಮರ್ಪಕವಾಗಿ ಜನರಿಗೆ ಮುಟ್ಟಲು ಅದಾಲತ್ ಹಮ್ಮಿಕೊಳ್ಳಲಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದರ ಜತೆಗೆ ಹೊಸ ಅರ್ಜಿಗಳ ಸ್ವೀಕಾರ ನಡೆಯಲಿದೆ. ಮುಂದೆ ಪ್ರತಿ ತಿಂಗಳು ಕಂದಾಯ ಅದಾಲತ್ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಮೇಯರ್ ಭಾಸ್ಕರ್ ಕೆ., ಮನಪಾ ಸದಸ್ಯರುಗಳಾದ ಪ್ರೇಮಾನಂದ ಶೆಟ್ಟಿ, ಮೀರಾ ಕರ್ಕೇರ, ಜಯಂತಿ ಆಚಾರ್ಯ, ದಿವಾಕರ್, ಸುರೇಂದ್ರ, ರಾಧಾಕೃಷ್ಣ, ಪೂರ್ಣಿಮಾ ಉಪಸ್ಥಿತರಿದ್ದರು.
ಪಿಂಚಣಿ ಪತ್ರ ವಿತರಣೆ
ವಿಧವಾವೇತನ, ವೃದ್ಧಾಪ್ಯ ವೇತನ, ಅಂಗವಿಕಲ ನಿಧಿ, ಮನಸ್ವಿನಿ ಯೋಜನೆಗಳಿಗೆ ಸಂಬಂಧಿಸಿ 174 ಮಂದಿ ಫಲಾನುಭವಿಗಳಿಗೆ ಪಿಂಚಣಿ ಪತ್ರ ವಿತರಿಸಲಾಯಿತು. ಪ್ರಕೃತಿ ವಿಕೋಪ ನಿಧಿಯಿಂದ 74 ಫಲಾನುಭವಿಗಳಿಗೆ 3.69 ಲಕ್ಷ ರೂ. ಪರಿಹಾರ ಚೆಕ್ ನೀಡಲಾಯಿತು.