×
Ad

ಕ್ರೀಡೆಯಿಂದ ಸ್ಮರಣ ಶಕ್ತಿ, ಕ್ರಿಯಾಶೀಲತೆ ವೃದ್ಧಿ: ಡಾ. ಕಿಶೋರ್ ಕುಮಾರ್

Update: 2018-09-28 18:04 IST

ಬಂಟ್ವಾಳ, ಸೆ. 28: ವಿದ್ಯಾಭಾರತಿ ಅಖಿಲಭಾರತ ಶಿಕ್ಷಾ ಸಂಸ್ಥಾನ್ ವಿದ್ಯಾಭಾರತಿ ಕರ್ನಾಟಕ, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಜಂಟಿ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆಯುವ ವಿದ್ಯಾಭಾರತಿ ಸಂಸ್ಥಾನದ ಪ್ರಾಥಮಿಕ, ಪ್ರೌಢ ಹಾಗೂ ಪಿಯುಸಿ ವಿಭಾಗದ ರಾಷ್ಟ್ರಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟಕ್ಕೆ ಕಲ್ಲಡ್ಕ ಶ್ರೀರಾಮ ವಿದ್ಯಾಲಯದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು. 

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಕಿಶೋರ್ ಕುಮಾರ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡೆಯಿಂದ ವ್ಯಕ್ತಿಯ ದೇಹಕ್ಕೆ ವ್ಯಾಯಮ, ಸ್ಮರಣ ಶಕ್ತಿ ಹಾಗೂ ಕ್ರಿಯಾಶೀಲತೆ ಹೆಚ್ಚುವುದರೊಂದಿಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯವಿದೆ. ಕ್ರೀಡಾಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಹೇಳಿದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲ ರಾಜ್ಯಗಳ ಕ್ರೀಡಾಪಟುಗಳು ಇಲ್ಲಿ ಸೇರುವ ಮೂಲಕ ಮಿನಿ ಭಾರತ ನಿರ್ಮಾಣಗೊಂಡಿದೆ. ವಿದ್ಯಾಭಾರತಿ ಮಾನವೀಯ ಸೇವೆಯನ್ನು ನೀಡುವುದರೊಂದಿಗೆ ದೇಶ ಕಟ್ಟುವ ಕಾಯಕದಲ್ಲೂ ತೊಡಗಿಸಿಕೊಂಡಿದೆ. ಹೊರ ರಾಜ್ಯಗಳಿಂದ ಬಂದಿರುವ ವಿದ್ಯಾರ್ಥಿಗಳು ಇಲ್ಲಿ ಇರುವಷ್ಟು ದಿನಗಳ ಕಾಲ ಕನ್ನಡ ಓದಲು ಬರೆಯಲು ಪ್ರಯತ್ನಿಸಿ ಎಂದು ತಿಳಿಸಿದರು. 

ವಿದ್ಯಾಭಾರತಿ ಕರ್ನಾಟಕದ ಅಧ್ಯಕ್ಷ ಎಂ.ಜೆ.ಸುಂದರ್‍ರಾಮ್, ವಿದ್ಯಾಭಾರತಿ ದಕ್ಷಿಣ ಮಧ್ಯಕ್ಷೇತ್ರ ಸಹ ಸಂಘಟನಾ ಕಾರ್ಯದರ್ಶಿ ಜಿ.ಆರ್. ಜಗದೀಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ವಿದ್ಯಾಭಾರತಿ ಕಾರ್ಯದರ್ಶಿ ವಸಂತ ಮಾಧವ ಸ್ವಾಗತಿಸಿದರು. ಪದವಿ ಕಾಲೇಜಿನ ಪ್ರಾಂಶುಪಾಲ ವಸಂತ ಬಲ್ಲಾಳ ವಂದಿಸಿದರು. ವಿದ್ಯಾರ್ಥಿನಿ ಸಂಜಿತಾ ಪ್ರತಿಜ್ಞಾ ವಿಧಿ ಭೋದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News