ರೋಹಿಂಗ್ಯಾ ನಿರಾಶ್ರಿತರ ವಿರುದ್ಧದ ಹಿಂಸೆ ನರಮೇಧ : ಕೆನಡಾ ಸಂಸತ್

Update: 2018-09-28 14:07 GMT

ಒಟ್ಟಾವ (ಕೆನಡ), ಸೆ. 28: ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂ ಕಿಯ ಕೆನಡ ಗೌರವ ಪೌರತ್ವವನ್ನು ಹಿಂದಕ್ಕೆ ಪಡೆಯುವ ನಿರ್ಣಯವೊಂದನ್ನು ಕೆನಡದ ಸಂಸದರು ಗುರುವಾರ ಅವಿರೋಧವಾಗಿ ಅಂಗೀಕರಿಸಿದ್ದಾರೆ.

ಮ್ಯಾನ್ಮಾರ್‌ನಲ್ಲಿ ಅಲ್ಪಸಂಖ್ಯಾತ ರೊಹಿಂಗ್ಯಾ ಮುಸ್ಲಿಮರ ಹತ್ಯಾಕಾಂಡವನ್ನು ತಡೆಯಲು ಯಾವುದೇ ಕ್ರಮವನ್ನು ತೆಗೆದುಕೊಳ್ಳಲು ಸೂ ಕಿ ವಿಫಲರಾಗಿರುವ ಹಿನ್ನೆಲೆಯಲ್ಲಿ ಕೆನಡ ಸಂಸತ್ತು ಈ ಕ್ರಮವನ್ನು ತೆಗೆದುಕೊಂಡಿದೆ.

ಹೌಸ್ ಆಫ್ ಕಾಮನ್ಸ್‌ನ ಲೋವರ್ ಚೇಂಬರ್ ತೆಗೆದುಕೊಂಡಿರುವ ಈ ನಿರ್ಧಾರ ಸದ್ಯಕ್ಕೆ ಯಾವುದೇ ಪರಿಣಾಮವನ್ನು ಹೊಂದಿರುವುದಿಲ್ಲ. ಯಾಕೆಂದರೆ, ಹೌಸ್ ಆಫ್ ಕಾಮನ್ಸ್ ಮತ್ತು ಮೇಲ್ಮನೆ ಸೆನೆಟ್ ಚೇಂಬರ್‌ಗಳು ಜಂಟಿಯಾಗಿ ಅಂಗೀಕರಿಸುವ ನಿರ್ಣಯದ ಮೂಲಕ ಕೆನಡದ ಗೌರವ ಪೌರತ್ವವನ್ನು ನೀಡಲಾಗುತ್ತದೆ.

ಗೌರವ ಪೌರತ್ವವನ್ನು ಹಿಂದಕ್ಕೆ ಪಡೆಯಲೂ ಇದೇ ರೀತಿಯನ್ನು ಅನುಸರಿಸಬೇಕಾಗುತ್ತದೆ. ಸೂ ಕಿಗೆ 2007ರಲ್ಲಿ ಕೆನಡದ ಗೌರವ ಪೌರತ್ವ ನೀಡಲಾಗಿತ್ತು.

ಮ್ಯಾನ್ಮಾರ್‌ನಲ್ಲಿ ವಾಸಿಸುತ್ತಿದ್ದ ಸುಮಾರು 7 ಲಕ್ಷ ರೊಹಿಂಗ್ಯಾ ಮುಸ್ಲಿಮರು ಕಳೆದ ವರ್ಷ ಸೇನೆಯ ದಮನ ಕಾರ್ಯಾಚರಣೆಗೆ ಬೆದರಿ ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News