ಧರ್ಮಗಳ ನಡುವೆ ಸ್ಪರ್ಧೆಯಿಲ್ಲ: ಮುಹಮ್ಮದ್ ಕುಂಞಿ
ಮಂಗಳೂರು, ಸೆ.28: ಧರ್ಮವನ್ನು ಪಾಲಿಸದವರಿಂದಲೇ ಸಮಸ್ಯೆಗಳು ಹೆಚ್ಚುತ್ತಿದ್ದು, ಧರ್ಮಗಳ ನಡುವೆ ಯಾವುದೇ ಸ್ಪರ್ಧೆಯಿಲ್ಲ ಎಂದು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ವಾಸ್‌ಲೇನ್‌ನ ಮಸ್ಜಿದ್ ಉಲ್-ಎಹ್ಸಾನ್‌ನಲ್ಲಿ ಹೈಲ್ಯಾಂಡ್ ಇಸ್ಲಾಮಿಕ್ ಫೋರಂ ಮತ್ತು ಹೈಲ್ಯಾಂಡ್ ಎಜುಕೇಶನಲ್ ಆ್ಯಂಡ್ ಕಲ್ಚರಲ್ ಸೆಂಟರ್‌ಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ‘ಈದ್ ಸೌಹಾರ್ದ ಕೂಟ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು.
ಹಿಂದೂಗಳು ನಿಷ್ಠೆಯಿಂದ ಹಿಂದೂ ಧರ್ಮವನ್ನು ಪಾಲಿಸಿದರೆ ಮುಸ್ಲಿಮರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಹಾಗೆಯೇ ಮುಸ್ಲಿಯರು ಇಸ್ಲಾಮ್‌ನ್ನು ಪಾಲಿಸಿ ಬದುಕಿದರೆ ಹಿಂದೂಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಕ್ರೈಸ್ತರು ಪ್ರಾರ್ಥಿಸಿದರೆ ಹಿಂದೂಗಳು ಹಾಗೂ ಮುಸ್ಲಿಮರಿಗೆ ನಷ್ಟ, ಶಾಂತಿ ಭಂಗವಾಗುವುದಿಲ್ಲ ಎಂದು ಹೇಳಿದರು.
ಜಗತ್ತಿನ ಯಾವುದೇ ಧರ್ಮದ ತತ್ವ, ಸಿದ್ಧಾಂತ, ಮೌಲ್ಯಗಳನ್ನು ಪಾಲಿಸಿದರೂ ಯಾರೇ ಅನುಸರಿಸಿದರೂ ಇನ್ನೊಬ್ಬರಿಗೆ ತೊಂದರೆ ಆಗುವುದಿಲ್ಲ. ಆದರೆ ಕೆಲವು ಧರ್ಮ, ತತ್ವ, ಸಿದ್ಧಾಂತಗಳನ್ನು ಅಧ್ಯಯನ ಮಾಡದೇ ಧರ್ಮ ರಕ್ಷಕರಂತೆ ವರ್ತಿಸುತ್ತಾರೆ. ಇಂತಹ ನಕಾರಾತ್ಮಕ ಬೆಳವಣಿಗೆಗಳು ಕ್ಷೀಣಿಸಬೇಕು. ಸೌಹಾರ್ದ ಹೆಚ್ಚಬೇಕು ಎಂದು ತಿಳಿಸಿದರು.
ಎಲ್ಲ ಧರ್ಮದವರು ಮುಕ್ತವಾಗಿ ಬೆರೆಯಬೇಕು. ವಿಭಜನೆಯ ಸಿದ್ಧಾಂತಗಳನ್ನು ಆರಾಧಿಸುವ ಸಂದರ್ಭದಲ್ಲಿ ಮನಸುಗಳನ್ನು ಬೆಸೆಯುವ ಇಂತಹ ಸೌಹಾರ್ದ ಕೂಟಗಳ ಆಯೋಜನೆ ಹೆಚ್ಚಾಗಬೇಕು. ಜನರ ನಡುವೆ ಪೈಶಾಚಿಕತೆ ಉಲ್ಬಣಿಸುತ್ತಿದೆ. ಧರ್ಮಗಳ ನಡುವೆ ಒಗ್ಗಟ್ಟು ಬೆಳೆಯಬೇಕು. ಮಾನವರು ವಿನಯಶೀಲರಾಗಬೇಕು. ಸಹೋದರತೆಯನ್ನು ಎಲ್ಲ ಧರ್ಮಗಳು ಹೇಳಿ ಕೊಟ್ಟಿವೆ. ಬಸವಣ್ಣ, ಸ್ವಾಮಿ ವಿವೇಕಾನಂದ, ನಾರಾಯಣ ಗುರುಗಳಂತಹವರ ತತ್ವ, ಸಿದ್ಧಾಂತಗಳು ಎಲ್ಲರಿಗೂ ದಾರಿದೀಪವಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮನಪಾ ಸದಸ್ಯರಾದ ಅಬ್ದುಲ್ ರವೂಫ್, ನವೀನ್ ಡಿಸೋಜ, ಹೈಲ್ಯಾಂಡ್ ಎಜುಕೇಶನಲ್ ಆ್ಯಂಡ್ ಕಲ್ಚರಲ್ ಸೆಂಟರ್‌ನ ಚೇರ್ ಮ್ಯಾನ್ ಅಹ್ಮದ್ ಮೊಹಿಯುದ್ದೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದಲ್ಲಿ ಹೈಲ್ಯಾಂಡ್ ಇಸ್ಲಾಮಿಕ್ ಫೋರಂನ ಅಧ್ಯಕ್ಷ ನಾಝಿಮ್ ಎಸ್.ಎಸ್., ಎ.ಕೆ. ಗ್ರೂಪ್‌ನ ಚೇರ್ ಮ್ಯಾನ್ ಎಂ.ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮೆಹಫೂಝ್ ದುಆಗೈದರು. ಹೈಲ್ಯಾಂಡ್ ಇಸ್ಲಾಮಿಕ್ ಫೋರಂನ ಸದಸ್ಯ ಮುಕ್ಸಿದ್ ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ರಿಝ್ವಾನ್ ಸ್ವಾಗತಿಸಿದರು. ಸಾಜಿದ್ ಎ.ಕೆ. ವಂದಿಸಿದರು.