×
Ad

ಇಂಡೋನೇಶ್ಯ: ಪ್ರಬಲ ಭೂಕಂಪದ ಬಳಿಕ ಅಪ್ಪಳಿಸಿದ ಸುನಾಮಿ

Update: 2018-09-28 20:08 IST

ಜಕಾರ್ತ, ಸೆ. 28: ಇಂಡೋನೇಶ್ಯದ ಮಧ್ಯ ಸುಲವೆಸಿ ದ್ವೀಪದಲ್ಲಿ ಶುಕ್ರವಾರ ಪ್ರಬಲ ಭೂಕಂಪ ಸಂಭವಿಸಿದ ಬಳಿಕ ರಾಜಧಾನಿ ಪಲು ನಗರಕ್ಕೆ ಸುನಾಮಿ ಅಪ್ಪಳಿಸಿದೆ.

‘‘ಪಲು ನಗರಕ್ಕೆ ಸುನಾಮಿ ಅಲೆಗಳು ಅಪ್ಪಳಿಸಿವೆ’’ ಎಂದು ಭೂಕಂಪ ಶಾಸ್ತ್ರ ಇಲಾಖೆಯ ಮುಖ್ಯಸ್ಥ ರಹಮತ್ ತ್ರಿಯೋನೊ ಹೇಳಿದ್ದಾರೆ. 3.50 ಲಕ್ಷ ಜನಸಂಖ್ಯೆಯ ನಗರವು ಭೂಕಂಪದ ಕೇಂದ್ರ ಬಿಂದಿನಿಂದ 80 ಕಿ.ಮೀ. ದೂರದಲ್ಲಿದೆ. ಸುನಾಮಿ ಅಲೆಗಳನ್ನು ಕಂಡು ಜನರು ಚೀರುತ್ತಾ ಓಡುತ್ತಿರುವುದನ್ನು ಇಂಡೋನೇಶ್ಯ ಟಿವಿ ತೋರಿಸಿದೆ.

 ರಿಕ್ಟರ್ ಮಾಪಕದಲ್ಲಿ 7.5ರಷ್ಟಿದ್ದ ಭೂಕಂಪದ ಕೇಂದ್ರ ಬಿಂದು ಡೊಂಗಾಲ ಪಟ್ಟಣದ ಈಶಾನ್ಯಕ್ಕೆ 56 ಕಿಲೋಮೀಟರ್ ದೂರದ ಸಮುದ್ರದಲ್ಲಿ 10 ಕಿ.ಮೀ. ಆಳದಲ್ಲಿತ್ತು ಎಂದು ಅಮೆರಿಕದ ಜಿಯಾಲಜಿಕಲ್ ಸರ್ವೆ ಹೇಳಿದೆ.

ಭೂಕಂಪದ ಬೆನ್ನಿಗೇ ಅಧಿಕಾರಿಗಳು ಸುನಾಮಿ ಎಚ್ಚರಿಕೆಯನ್ನು ಹೊರಡಿಸಿದ್ದರು. ಆದರೆ, ಸ್ವಲ್ಪ ಸಮಯದ ಬಳಿಕ ಎಚ್ಚರಿಕೆಯನ್ನು ಹಿಂದಕ್ಕೆ ಪಡೆದುಕೊಂಡಿದ್ದರು.

ಅದರ ಬಳಿಕ ಸುನಾಮಿ ಅಪ್ಪಳಿಸಿದೆ ಎನ್ನಲಾಗಿದೆ. ಇದಕ್ಕೂ ಮುನ್ನ ಶುಕ್ರವಾರ ಮುಂಜಾನೆ ಅದೇ ವಲಯದಲ್ಲಿ 6.1ರ ತೀವ್ರತೆಯ ಭೂಕಂಪ ಸಂಭವಿಸಿತ್ತು. ಅದರ ಪರಿಣಾಮವಾಗಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ, 10 ಮಂದಿ ಗಾಯಗೊಂಡಿದ್ದಾರೆ ಹಾಗೂ ಡಝನ್‌ಗಟ್ಟಳೆ ಮನೆಗಳು ನಾಶವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News