×
Ad

ಮನಸ್ಸಿನ ಭಾವನೆಗಳಿಗೆ ರೇಖೆಗಳ ಪ್ರತಿಬಿಂಬವೇ ಚಿತ್ರಕಲೆ: ಕಲಾ ಶಿಕ್ಷಕ ದಿನಮಣಿ ಶಾಸ್ತ್ರೀ

Update: 2018-09-28 20:30 IST

ಉಡುಪಿ, ಸೆ.28: ನಮ್ಮ ಮನಸ್ಸಿನ ಭಾವನೆಗಳನ್ನು ರೇಖೆಗಳ ಮೂಲಕ ಪ್ರತಿಬಿಂಬಿಸುವುದೇ ಚಿತ್ರಕಲೆ. ಭಾರತೀಯ ಮೂಲದ ಚಿತ್ರಕಲೆಗಳು ನಶಿಸದಂತೆ ಚಿತ್ರಕಲಾ ಶಾಲೆಗಳು ಪ್ರಯತ್ನಿಸಬೇಕು. ಇದರಿಂದ ಭಾರತೀಯ ಚಿತ್ರಕಲೆಯನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ಬ್ರಹ್ಮಾವರದ ಹಿರಿಯ ಚಿತ್ರಕಲಾ ಶಿಕ್ಷಕ ದಿನವುಣಿ ಶಾಸ್ತ್ರೀ ಹೇಳಿದ್ದಾರೆ.

ಉಡುಪಿ ಜಂಗಮ ಮಠದಲ್ಲಿರುವ ಚಿತ್ರಕಲಾ ಮಂದಿರ ಕಲಾ ವಿದ್ಯಾಲಯ ದ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ಶುಕ್ರವಾರ ಪ್ರಾರಂಭಗೊಂಡ ಚಿತ್ರಕಲಾ ಶಾಲೆಯ ವಿದ್ಯಾರ್ಥಿಗಳ ವಾರ್ಷಿಕ ಕಲಾ ಪ್ರದರ್ಶನ ‘ಎಕ್ಸ್‌ಪ್ರೆಷನ್- 2018’ ನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಭಾರತೀಯ ಚಿತ್ರಕಲೆಯು ಸಿಂಧೂ ಕಣಿವೆಯಿಂದ ಆರಂಭಗೊಂಡಿದ್ದು, ಇದು ವಿಶ್ವಕ್ಕೆ ಮಾದರಿಯಾಗಿದೆ. ಭಾರತೀಯರು ಸಹಜತೆ ಹಾಗೂ ಭಾವನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಭಾರತದ ಚಿತ್ರಕಲೆಗಳು ವಿದೇಶಿ ರಿಗೂ ಅಪ್ಯಾಯಮಾನವಾಗಿದೆ ಎಂದರು.

ನಿವೃತ್ತ ಹಿರಿಯ ಕಲಾ ಶಿಕ್ಷಕ ಡಿ.ಎಲ್.ಆಚಾರ್ಯ ಮಾತನಾಡಿ, ಚಿತ್ರಕಲೆ ಯಲ್ಲಿ ಹೆಚ್ಚು ಹೆಚ್ಚು ಸಂಶೋಧನೆ ನಡೆಸುವ ಮೂಲಕ ಹೊಸತನ್ನು ರೂಪಿಸ ಬಹುದು. ಚಿತ್ರಕಲಾ ವಿದ್ಯಾರ್ಥಿಗಳು ಹೆಚ್ಚೆಚ್ಚು ಚಿತ್ರ ವೀಕ್ಷಿಸುವುದು, ಪ್ರದರ್ಶನಗಳಲ್ಲಿ ಭಾಗವಹಿಸುವುದರಿಂದ ಸಾಕಷ್ಟು ಮಾಹಿತಿ, ಮಾರ್ಗದರ್ಶನ ದೊಂದಿಗೆ ಕಲೆಯ ಕುರಿತು ಸ್ಪಷ್ಟತೆ ಮೂಡುತ್ತದೆ ಎಂದರು.

ಚಿತ್ರಕಲಾ ಮಂದಿರ ಕಲಾ ವಿದ್ಯಾಲಯದ ನಿರ್ದೇಶಕ ಡಾ.ಯು.ಸಿ. ನಿರಂಜನ್ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ ಸಮೂಹ ಸಂಸ್ಥೆಗಳ ಸಂದರ್ಶನ ಪ್ರಾಧ್ಯಾಪಕ ಬಿ.ಎ. ಆಚಾರ್ಯ ಉಪಸ್ಥಿತರಿದ್ದರು. ಕಲಾ ವಿದ್ಯಾಲಯದ ಪ್ರಾಂಶುಪಾಲ ರಾಜೇಂದ್ರ ತ್ರಾಸಿ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಮೇಘಾ ಹೆಗ್ಡೆ ನಿರೂಪಿಸಿ, ಪ್ರದೀಪ್ ಕುಮಾರ್ ವಂದಿಸಿದರು.

ಚಿತ್ರಕಲಾ ಮಂದಿರ ಕಲಾವಿದ್ಯಾಲಯದ 11 ಮಂದಿ ವಿದ್ಯಾರ್ಥಿಗಳಿಂದ ರಚಿಸಲ್ಪಟ್ಟ ಸಮಕಾಲೀನ, ಸಾಂಪ್ರದಾಯಿಕ ಹಾಗೂ ಆಧುನಿಕ ಶೈಲಿಯ 40 ಚಿತ್ರಗಳ ಪ್ರದರ್ಶನ ಇಂದಿನಿಂದ ಅ.2ರವರೆಗೆ ನಡೆಯಲಿದೆ. ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತ ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News