×
Ad

ಕೆಎಂಸಿ: ಜಿಲ್ಲಾ ಪೊಲೀಸರಿಗೆ ಉಚಿತ ಹೃದಯ ತಪಾಸಣಾ ಶಿಬಿರ

Update: 2018-09-28 20:47 IST

ಮಣಿಪಾಲ, ಸೆ. 28: ವಿಶ್ವ ಹೃದಯ ದಿನಾಚರಣೆಯ ಅಂಗವಾಗಿ ಮಣಿಪಾಲ ಕಸ್ತೂರ್‌ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಕಾರ್ಡಿಯೋಲಜಿ ವಿಭಾಗವು ಮಾಹೆ ಮಣಿಪಾಲ, ಸೋಹಾಸ್ ಹಾಗೂ ಸಿವಿಟಿ ವಿಭಾಗಗಳ ಸಹಯೋಗದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಸಿಬ್ಬಂದಿಗಳಿಗೆ ಉಚಿತ ಹೃದಯ ತಪಾಸಣಾ ಶಿಬಿರವನ್ನು ಶುಕ್ರವಾರ ಡಾ.ಟಿಎಂಎ ಪೈ ಸಭಾಂಗಣದಲ್ಲಿ ಆಯೋಜಿಸಿತ್ತು.

ಜಿಲ್ಲೆಯ ಸುಮಾರು 500ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಅವರಿಗೆ ಉಚಿತ ಹೃದಯ ತಪಾಸಣೆ, ತಜ್ಞರೊಂದಿಗೆ ಆರೋಗ್ಯದ ಕುರಿತು ಸಮಾಲೋಚನೆ, ಉಚಿತ ಇಸಿಜಿ, ಎಕೋ ಕಾರ್ಡಿಯೋಗ್ರಾಮ್‌ಗಳು ಸೇರಿದ್ದವು.

ಶಿಬಿರವನ್ನು ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬಿ. ನಿಂಬರ್ಗಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಪೊಲೀಸ್ ಇಲಾಖೆ ಹೆಚ್ಚು ಪಾರದರ್ಶಕವಾಗಿದ್ದು, ಉತ್ತರದಾಯಿತ್ವವನ್ನು ಹೊಂದಿದೆ. ಉಡುಪಿ ಜಿಲ್ಲೆಯಲ್ಲಿ ಅಂದಾಜು 13 ಲಕ್ಷ ಜನಸಂಖ್ಯೆಯಿದ್ದು, ಇಡೀ ಜಿಲ್ಲೆಯಲ್ಲಿ 900 ಮಂದಿ ಪೊಲೀಸ್ ಸಿಬ್ಬಂದಿಗಳು ದಿನದ 24 ಗಂಟೆಗಳ ಕಾಲವೂ ನಾಗರಿಕರ ರಕ್ಷಣೆಯ ಾರ್ಯದಲ್ಲಿ ನಿರತರಾಗಿದ್ದಾರೆ ಎಂದರು.

ಪೊಲೀಸರು ಮನೆಯೊಳಗಿನ ಜಗಳ, ಅಕ್ಕ-ಪಕ್ಕದ ಮನೆಯವರ ಹೊಯ್ದಟದಿಂದ ಹಿಡಿದು ಜಟಿಲ ಕೇಸುಗಳವರೆಗೆ ಎಲ್ಲವನ್ನೂ ಬಗೆಹರಿಸ ಬೇಕಾಗಿದೆ. ಇದು ಅತ್ಯಂತ ಒತ್ತಡದಿಂದ ಕೂಡಿದ ಕೆಲಸವಾಗಿದೆ. ಹೀಗಾಗಿ ಪೊಲೀಸ್ ಸಿಬ್ಬಂದಿಗಳಿಗೆ ವರ್ಷಕ್ಕೊಮ್ಮೆಯಾದರೂ ತಪ್ಪದೇ ಮೆಡಿಕಲ್ ಚೆಕ್‌ಅಪ್ ಹಾಗೂ ಹೃದಯ ತಪಾಸಣೆ ನಡೆಯಲೇಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ.ಪೂರ್ಣಿಮಾ ಬಾಳಿಗಾ ಅವರು ಮಾತನಾಡಿ, ಆರೋಗ್ಯಪೂರ್ಣವಾದ ಜೀವನಶೈಲಿ, ಮಿತವಾದ ಆಹಾರ ಹಾಗೂ ನಗುಮೊಗದ ಕೆಲಸದಿಂದ ಪೊಲೀಸರ ಹೃದಯ ಸದಾ ಆರೋಗ್ಯಪೂರ್ಣವಾಗಿರುತ್ತದೆ. ಅಲ್ಲದೇ ಪೊಲೀಸರಿಗೆ ಒತ್ತಡವನ್ನು ಸರಿಯಾಗಿ ನಿರ್ವಹಿಸುವ ಕುರಿತು ತರಬೇತಿಯನ್ನೂ ನೀಡಬೇಕಾಗಿದೆ ಎಂದರು.

ಮಣಿಪಾಲ ಕೆಎಂಸಿಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಅವಿನಾಶ್ ಶೆಟ್ಟಿ ಅವರು ಮಾತನಾಡಿ, ಪೊಲೀಸರಿಗೆ ವರ್ಷದಲ್ಲೊಮ್ಮೆ ವೈದ್ಯಕೀಯ ತಪಾಸಣೆ ಸಾಕಾಗದು. ಇದನ್ನು ಅವರು ಆಗಾಗ ಮಾಡುತ್ತಿರಬೇಕು. ಮುಂದಿನ ವರ್ಷದಿಂದ ಕೆಎಂಸಿ ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳಿಗೆ ಉಚಿತ ವೈದ್ಯಕೀಯ ತಪಾಸಣೆಯನ್ನು ಸೇವೆಯನ್ನು ನೀಡಲಿದೆ ಎಂದವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News