×
Ad

ಅ. 3: ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರಿಂದ ರಕ್ತದಾನ ಶಿಬಿರ

Update: 2018-09-28 20:49 IST

ಉಡುಪಿ, ಸೆ. 28: ರಾಜ್ಯ ಸರಕಾರಿ ನೌಕರರಿಗೆ 2006ರಿಂದ ಜಾರಿಗೆ ತಂದಿರುವ ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಮೊದಲಿನ ನಿಶ್ಚಿತ ಹಳೆ ಪಿಂಚಣಿ ಯೋಜನೆಯನ್ನು ಮರುಜಾರಿಗೊಳಿಸುವಂತೆ ಹಕ್ಕೊತ್ತಾಯ ಮಂಡಿಸಿ ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘದ ಉಡುಪಿ ಜಿಲ್ಲಾ ಘಟಕ ಹಾಗೂ ಮೂರು ತಾಲೂಕು ಘಟಕಗಳ ಸಹಯೋಗದೊಂದಿಗೆ ‘ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಘೋಷಣೆಯೊಂದಿಗೆ ಬೃಹತ್ ರಕ್ತದಾನ ಶಿಬಿರವನ್ನು ಉಡುಪಿ ಅಜ್ಜರಕಾಡಿನ ಪುರಭವನದ ಮಿನಿ ಹಾಲ್‌ನಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ರಾಘವ ಶೆಟ್ಟಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಉಡುಪಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಹಾಗೂ ಕುಂದಾಪುರದ ಭಂಡಾರ್‌ಕಾರ್ಸ್‌ ಕಾಲೇಜಿನ ಕೋಯಾಕುಟ್ಟಿ ಹಾಲ್ ಮತ್ತು ಕಾರ್ಕಳದ ಬಂಡಿಮಠದ ಸರಕಾರಿ ನೌಕರರ ಭವನದಲ್ಲಿ ತಾಲೂಕು ಮಟ್ಟದಲ್ಲಿ ರಕ್ತದಾನ ಶಿಬಿರಗಳು ನಡೆಯಲಿವೆ. ಇದರಲ್ಲಿ ಸುಮಾರು 500 ಯುನಿಟ್ ರಕ್ತ ಸಂಗ್ರಹಿಸುವ ಗುರಿ ಇದೆ ಎಂದವರು ತಿಳಿಸಿದರು.

ರಾಜ್ಯದಲ್ಲೀಗ 3.20 ಲಕ್ಷ ಎನ್‌ಪಿಎಸ್ ನೌಕರರಿದ್ದು, ಅ.3ರಂದು ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ‘ರಕ್ತಕೊಟ್ಟೇವು, ಪಿಂಚಣಿ ಬಿಡೆವು’ ಘೋಷಣೆಯೊಂದಿಗೆ ರಕ್ತದಾನ ಶಿಬಿರ ನಡೆಯಲಿದೆ ಎಂದರು.

ಉಡುಪಿಯಲ್ಲಿ ಜಿಲ್ಲಾಸ್ಪತ್ರೆ ಹಾಗೂ ಜಿಲ್ಲಾ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಈ ರಕ್ತದಾನ ಶಿಬಿರ ನಡೆಯಲಿದ್ದು, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಇದನ್ನು ಬೆಳಗ್ಗೆ 9:30ಕ್ಕೆ ಉದ್ಘಾಟಿಸಲಿದ್ದಾರೆ. ಶಾಸಕ ಕೆ.ರಘುಪತಿ ಭಟ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ ಎಂದರು.

ಸಂಘದ ಉಡುಪಿ ತಾಲೂಕು ಅಧ್ಯಕ್ಷ ರವಿಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಡಿಎಚ್‌ಒ ಡಾ.ರೋಹಿಣಿ, ರಕ್ತನಿಧಿಯ ವೈದ್ಯಾಧಿಕಾರಿ ಡಾ.ವೀಣಾ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಹಾಗೂ ಇತರರು ಉಪಸ್ಥಿತರಿರುವರು. 

ಸುದ್ದಿಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ರವಿಕುಮಾರ್, ಜಿಲ್ಲಾ ಕಾರ್ಯದರ್ಶಿ ರಾಮಚಂದ್ರ ವಾಕುಡ, ಗೌರವ ಸಲಹೆಗಾರ ಪ್ರಶಾಂತ್ ಶೆಟ್ಟಿ ಹಾವಂಜೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News