×
Ad

ಗಾಂಜಾ ಬಚ್ಚಿಟ್ಟ ಪ್ರಕರಣ: ಇಬ್ಬರು ಅಪರಾಧಿಗಳಿಗೆ ಕಠಿಣ ಶಿಕ್ಷೆ

Update: 2018-09-28 20:52 IST

ಮಂಗಳೂರು, ಸೆ.28: ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಅಕ್ರಮವಾಗಿ ಸ್ವಾಧೀನದಲ್ಲಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಇಬ್ಬರಿಗೆ 10 ವರ್ಷ ಕಠಿಣ ಶಿಕ್ಷೆ ಹಾಗೂ 1ಲಕ್ಷ ರೂ. ದಂಡ ವಿಧಿಸಿದೆ.

ತಮಿಳುನಾಡಿನ ಗುಡಲೂರು ನಾಡುಗಾಣಿ ನಿವಾಸಿಗಳಾದ ಚಂದ್ರಕುಮಾರ್ ಅಲಿಯಾಸ್ ಸಿನ್ನವನ್ (36) ಹಾಗೂ ಶಾಂತಕುಮಾರ್ (24) ಶಿಕ್ಷೆಗೊಳಗಾದ ಅಪರಾಧಿಗಳು. ಈ ಪ್ರಕರಣದಲ್ಲಿ ಆರೋಪಿ ತಮಿಳು ಸೆಲ್ವಿಯನ್ನು ಸಾಕ್ಷಾಧಾರ ಕೊರತೆಯ ಹಿನ್ನೆಲೆಯಲ್ಲಿ ಬಿಡುಗಡೆಗೊಳಿಸಲಾಗಿದೆ.

2017ರ ಮೇ 23ರಂದು  ಧರ್ಮಸ್ಥಳ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಯಾವುದೇ ಪರವಾನಗಿಯಿಲ್ಲದೆ 4 ಲಕ್ಷ ರೂ. ಮೌಲ್ಯದ 20.135 ಕಿ.ಗ್ರಾಂ. ತೂಕದ ಗಾಂಜಾವನ್ನು ಅಕ್ರಮವಾಗಿ ಸ್ವಾಧೀನದಲ್ಲಿಟ್ಟುಕೊಂಡ ಆರೋಪವು ಇವರ ಮೇಲಿತ್ತು. ಈ ಬಗ್ಗೆ ಡಿವೈಎಸ್ಪಿ ರವೀಶ್ ಸಿ.ಆರ್., ಡಿಸಿಐಬಿ ಇನ್‌ಸ್ಪೆಕ್ಟರ್ ಅಮಾನುಲ್ಲಾ ನೇತೃತ್ವದ ಪೊಲೀಸ್ ತಂಡ ಮಾಹಿತಿ ಪಡೆದು ಧರ್ಮಸ್ಥಳ ಪೊಲೀಸರ ಸಹಕಾರದೊಂದಿಗೆ ದಾಳಿ ನಡೆಸಿ ಗಾಂಜಾ ವಶಪಡಿಸಿಕೊಂಡಿದ್ದರು.

ಪ್ರಕರಣ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಮಾದಕ ದ್ರವ್ಯ ಕಾಯ್ದೆಯಡಿಯಲ್ಲಿನ ವಿಶೇಷ ನ್ಯಾಯಾಧೀೀಶ ಕೆ.ಎಸ್. ಬೀಳಗಿ ಸಾಕ್ಷಿ ವಿಚಾರಣೆ ನಡೆಸಿದ್ದರು. ಹಾಲಿ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣ ಆಚಾರ್ಯ ಇತ್ತಂಡಗಳ ವಾದವನ್ನು ಆಲಿಸಿ ಚಂದ್ರಕುಮಾರ್ ಮತ್ತು ಶಾಂತಕುಮಾರ್ ವಿರುದ್ಧ ತೀರ್ಪು ನೀಡಿದ್ದಾರೆ.

ಆರೋಪಿಗಳ ಬಳಿ 20 ಕೆಜಿಗೂ ಅಧಿಕ ಗಾಂಜಾ ಸಿಕ್ಕ ಕಾರಣ ವಾಣಿಜ್ಯ ಉದ್ದೇಶವೆಂದು ತೀಮಾರ್ನಿಸಿ ಅಪರಾಧಿಗಳಿಗೆ ತಲಾ 10 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ತೆರಲು ತಪ್ಪಿದಲ್ಲಿ ಮತ್ತೆ 6 ತಿಂಗಳು ಸಾದಾ ಶಿಕ್ಷೆ ಅನುಭವಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಧರ್ಮಸ್ಥಳ ಠಾಣೆಯ ಹಿಂದಿನ ಎಸ್ಸೈ ಕೊರಗಪ್ಪ ದಾಳಿಗೆ ಸಹಕರಿಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಡಿವೈಎಸ್ಪಿ ಸಿ.ಆರ್. ರವೀಶ್ ಸಹಿತ 5 ಮಂದಿ ಸಾಕ್ಷಿದಾರರನ್ನು ವಿಚಾರಣೆ ನಡೆಸಲಾಗಿತ್ತು ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕುದ್ರಿಯ ಪುಷ್ಪರಾಜ್ ಅಡ್ಯಂತಾಯ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News