50 ಮಿ. ಬಳಕೆದಾರರ ಮಾಹಿತಿ ಸೋರಿಕೆ: ಫೇಸ್‌ಬುಕ್

Update: 2018-09-28 18:04 GMT

ನ್ಯೂಯಾರ್ಕ್, ಸೆ.28: ಈ ವಾರದ ಆರಂಭದಲ್ಲಿ ಭದ್ರತಾ ಲೋಪವು ಸುಮಾರು 50 ಮಿಲಿಯ ಖಾತೆಗಳ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನುಂಟು ಮಾಡಿತ್ತು. ಬಳಕೆದಾರರ ಖಾತೆಗಳಿಗೆ ಕನ್ನ ಹಾಕಲು ಹ್ಯಾಕರ್‌ಗಳಿಗೆ ಅವಕಾಶ ನೀಡಿದ್ದ ಈ ಲೋಪವನ್ನು ಈಗ ನಿವಾರಿಸಲಾಗಿದೆ ಎಂದು ಫೇಸ್‌ಬುಕ್ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.

ಈ ಭದ್ರತಾ ಉಲ್ಲಂಘನೆಯ ಕುರಿತು ತಾನು ಕಾನೂನು ಜಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿರುವುದಾಗಿಯೂ ಅದು ತಿಳಿಸಿದೆ. ಈ ಸುದ್ದಿಯಿಂದಾಗಿ ಶೇರು ಮಾರುಕಟ್ಟೆಗಳಲ್ಲಿ ಫೇಸ್‌ಬುಕ್ ಶೇರುಗಳು ಶೇ.3ರಷ್ಟು ಕುಸಿತ ಕಂಡಿದ್ದವು.

ತಮ್ಮ ಖಾತೆ ಇತರರಿಗೆ ಹೇಗೆ ಕಾಣಿಸುತ್ತದೆ ಎನ್ನುವುದನ್ನು ಬಳಕೆದಾರರು ನೋಡಲು ತಾನು ನೀಡಿದ್ದ ‘ವ್ಯೆ ಆ್ಯಜ್’ ಫೀಚರ್‌ಗಾಗಿ ಫೇಸ್‌ಬುಕ್ ಕೋಡ್‌ನಲ್ಲಿ ದೋಷವಿತ್ತು ಮತ್ತು ಇದು ಹ್ಯಾಕಿಂಗ್‌ನ್ನು ಸುಲಭವಾಗಿಸಿತ್ತು. 2017,ಜುಲೈನಲ್ಲಿ ವೀಡಿಯೊ ಅಪ್‌ಲೋಡಿಂಗ್ ಫೀಚರ್‌ನಲ್ಲಿ ತಾನು ಮಾಡಿದ್ದ ಬದಲಾವಣೆ ‘ವ್ಯೆ ಆ್ಯಜ್’ನಲ್ಲಿ ಈ ಲೋಪಕ್ಕೆ ಕಾರಣವಾಗಿತ್ತು ಎಂದು ಫೇಸ್‌ಬುಕ್ ತಿಳಿಸಿದೆ.

ಕಳೆದ ವರ್ಷ ತಮ್ಮ ಪ್ರೊಫೈಲ್‌ನಲ್ಲಿ ‘ವ್ಯೆ ಆ್ಯಜ್’ ಟೂಲ್ ಬಳಸಿದ್ದ ಪ್ರತಿಯೊಬ್ಬರೂ ಫೇಸ್‌ಬುಕ್‌ಗೆ ಮತ್ತೆ ಲಾಗಾನ್ ಆಗಬೇಕಾಗುತ್ತದೆ ಎಂದು ಅದು ಹೇಳಿದೆ. ಸುಮಾರು 90 ಮಿಲಿಯ ಬಳಕೆದಾರರು ಪುನಃ ಲಾಗಾನ್ ಆಗಬೇಕಾಗುತ್ತದೆ ಎಂದು ಅದು ಅಂದಾಜಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News