×
Ad

1.20ಕೋಟಿ ಮಂದಿಯ ಆರೋಗ್ಯ ಚಿಕಿತ್ಸೆಗೆ ಪ್ರತಿವರ್ಷ ತಲಾ 5ಲಕ್ಷ ರೂ. ವ್ಯಯ: ಸಚಿವ ಶಿವಾನಂದ ಪಾಟೀಲ್

Update: 2018-09-29 16:58 IST

ಉಡುಪಿ, ಸೆ.29: ರಾಜ್ಯ ಸರಕಾರದ ಆರೋಗ್ಯ ಕರ್ನಾಟಕ ಯೋಜನೆ ಯನ್ನು ಕೇಂದ್ರದ ಆಯುಷ್‌ಮಾನ್ ಯೋಜನೆಯೊಂದಿಗೆ ಸಂಯೋಜನೆ ಮಾಡಲು ಉದ್ದೇಶಿಸಲಾಗಿದೆ. ಅದರಂತೆ ರಾಜ್ಯ ಸರಕಾರ ಕರ್ನಾಟಕದಲ್ಲಿ ಆಯುಷ್‌ಮಾನ್ ಯೋಜನೆಯಡಿ 62 ಲಕ್ಷ ಹಾಗೂ ಅದರಿಂದ ಹೊರಗುಳಿದ 58ಲಕ್ಷ ಬಡವರನ್ನು ಸೇರಿಸಿಕೊಂಡು ಒಟ್ಟು 1.20ಕೋಟಿ ಜನರ ಆರೋಗ್ಯ ಚಿಕಿತ್ಸೆಗಾಗಿ ಪ್ರತಿವರ್ಷ ತಲಾ 5ಲಕ್ಷ ರೂ.ವರೆಗೆ ವ್ಯಯ ಮಾಡಲಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಎಸ್. ಪಾಟೀಲ್ ತಿಳಿಸಿದ್ದಾರೆ.

ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್, ಜಿಲ್ಲಾ ಮೊಗವೀರ ಯುವ ಸಂಘ ಟನೆ ಹಾಗೂ ಮಣಿಪಾಲ ಮಾಹೆಯ ಸಹಯೋಗದೊಂದಿಗೆ ಶನಿವಾರ ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದಲ್ಲಿ ಆಯೋಜಿಸಲಾದ 30,000 ಕುಟುಂಬಗಳ 1.35ಲಕ್ಷ ಫಲಾನುಭವಿಗಳಿಗೆ ಆರೋಗ್ಯ ಸುರಕ್ಷಾ ಕಾರ್ಡ್‌ಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಈ ಯೋಜನೆಯಡಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಜೊತೆಯಾಗಿ ಒಟ್ಟು 1600 ರೋಗಳನ್ನು ಗುರುತಿಸಿ ಅವುಗಳ ಚಿಕಿತ್ಸೆಗೆ ವೆಚ್ಚ ಮಾಡಲು ನಿರ್ಧರಿಸಿವೆ. ಆದರೂ ಇನ್ನು ಅನೇಕ ರೋಗಗಳು ಎರಡೂ ಸರಕಾರಗಳ ಪಟ್ಟಿ ಯಿಂದ ಹೊರಗೆ ಉಳಿದುಕೊಂಡಿವೆ. ವೈಜ್ಞಾನಿಕವಾಗಿ ಮುಂದುವರಿದಂತೆ ಹೊಸ ಹೊಸ ರೋಗಗಳು ಉದ್ಭವವಾಗುತ್ತಲೇ ಇವೆ. ಇದು ನಮ್ಮ ಮುಂದಿ ರುವ ದೊಡ್ಡ ಸವಾಲು ಆಗಿದೆ ಎಂದರು.

ಸಾಮಾಜದ ಸ್ವಸ್ಥ ಕಾಪಾಡುವುದು ಸರಕಾರದ ಜವಾಬ್ದಾರಿಯಾಗಿದೆ. ಅದರಲ್ಲಿ ಸರಕಾರ ಎಡವಿದಾಗ ಆ ಕೆಲಸವನ್ನು ಟ್ರಸ್ಟ್‌ಗಳು ಮಾಡುತ್ತವೆ. ಈ ದೇಶದಲ್ಲಿ ಜನರನ್ನು ಕಾಡಿದ ಅನೇಕ ಮಾರಕ ರೋಗಗಳನ್ನು ತೊಲಗಿಸುವ ಕೆಲಸದಲ್ಲಿ ಸರಕಾರಗಳ ಜೊತೆ ಟ್ರಸ್ಟ್, ಸಂಘ ಸಂಸ್ಥೆಗಳು ಕೂಡ ಕೈಜೋಡಿಸಿವೆ ಎಂದು ಅವರು ಹೇಳಿದರು.

ಟ್ರಸ್ಟ್‌ನ ಪ್ರವರ್ತಕ ಡಾ.ಜಿ.ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಟ್ರಸ್ಟ್ ವತಿಯಿಂದ ಕ್ಯಾನ್ಸರ್ ಮತ್ತು ಕಿಡ್ನಿ ರೋಗಿಗಳ ಚಿಕಿತ್ಸೆಗಾಗಿ ಅವಿಭಜಿತ ದ.ಕ. ಜಿಲ್ಲೆಯ ಪ್ರಮುಖ ಆಸ್ಪತ್ರೆಗಳಿಗೆ 2.5ಕೋಟಿ ರೂ. ಧನಸಹಾಯ ನೀಡಲಾಗು ವುದು. ಕುಂದಾಪುರದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಹೆರಿಗೆ ಆಸ್ಪತ್ರೆ ಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಸಾಂಕೇತಿಕವಾಗಿ ಕಾರ್ಡ್ ವಿತರಿಸಿದರು. ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ವಿನಯ್ ಕರ್ಕೇರ ಮಲ್ಪೆ ವಹಿಸಿದ್ದರು.

ಮೊಗವೀರ ಯುವ ಸಂಘಟನೆಯ ಮಾಜಿ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಸ್ವಾಗತಿಸಿದರು. ಟ್ರಸ್ಟ್ ಸದಸ್ಯ ಶಂಕರ್ ಸಾಲ್ಯಾನ್ ವಂದಿಸಿದರು. ಚಂದ್ರೇಶ್ ಪಿತ್ರೋಡಿ ಕಾರ್ಯಕ್ರಮ ನಿರೂಪಿಸಿದರು.

ಬಿ.ಆರ್.ಶೆಟ್ಟಿಗೆ ಸಚಿವರ ಖಡಕ್ ಎಚ್ಚರಿಕೆ

ಉಡುಪಿ ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದು ಇಂದಿನ ಅಗತ್ಯ ವಾಗಿದ್ದು, ಆ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು. ಹಾಜಿ ಅಬ್ದುಲ್ಲಾ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ನಿರ್ವಹಣೆಯನ್ನು ವಹಿಸಿಕೊಂಡಿರುವ ಉದ್ಯಮಿ ಬಿ.ಆರ್.ಶೆಟ್ಟಿ ಜನಸಾಮಾನ್ಯರಿಗೆ ಅನುಕೂಲವಾಗುವ ರೀತಿ ಯಲ್ಲಿ ಕೆಲಸ ಮಾಡಬೇಕು. ಇಲ್ಲದಿದ್ದರೆ ಸರಕಾರ ಅವರ ಜೊತೆ ಖಂಡಿತವಾಗಿಯೂ ಇರುವುದಿಲ್ಲ ಎಂದು ಸಚಿವ ಶಿವಾನಂದ ಪಾಟೀಲ್ ಖಡಕ್ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News