×
Ad

ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆ: ಕಲಾಪ ನುಂಗಿದ ಸ್ಮಾರ್ಟ್ ಸಿಟಿ ಯೋಜನೆ

Update: 2018-09-29 18:09 IST

ಮಂಗಳೂರು, ಸೆ. 30: ನಗರದಲ್ಲಿ ಬಹು ನಿರೀಕ್ಷೆಯ ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳಿಗೇ ಮಾಹಿತಿ ದೊರೆಯುತ್ತಿಲ್ಲ ಎಂಬ ಅಸಮಾಧಾನವು ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರಿಂದ ತೀವ್ರ ಚರ್ಚೆಗೆ ಕಾರಣವಾಯಿತು.

ಮೇಯರ್ ಭಾಸ್ಕರ ಕೆ. ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ದೀಪಕ್ ಪೂಜಾರಿ, ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳ ಬಗ್ಗೆ ಪಾಲಿಕೆ ಸದಸ್ಯರಿಗೆ ಇದುವರೆಗೆ ಯಾವುೇ ಮಾಹಿತಿ ನೀಡಿಲ್ಲ ಎಂದು ದೂರಿದರು.

ಸ್ಮಾರ್ಟ್ ಸಿಟಿ ಯೋಜನೆಯ ಅನುಷ್ಠಾನದಲ್ಲಿ ಲೋಪವಿರುವ ಬಗ್ಗೆ ಈ ಹಿಂದೆ ಪ್ರಸ್ತಾಪಿಸಿದ್ದೆ. ಪಾಲಿಕೆ ವತಿಯಿಂದ ಸಾವಿರ ಕೋಟಿ ರೂ. ವ್ಯಯ ಮಾಡುವ ಯೋಜನೆ ಬಗ್ಗೆ ಮಾಹಿತಿ ಪಡೆಯುವ ಅಧಿಕಾರವೂ ಇಲ್ಲದಂತಾಗಿದೆ ಎಂದು ಮಾಜಿ ಮೇಯರ್ ಮಹಾಬಲ ಮಾರ್ಲ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಪಕ್ಷದ ಸದಸ್ಯರಾದ ಸುಧೀರ್ ಶೆಟ್ಟಿ, ಪ್ರೇಮಾನಂದ ಶೆಟ್ಟಿ, ರಾಜೇಂದ್ರ ಕುಮಾರ್ ಕೂಡಾ ಸ್ಮಾರ್ಟ್ ಸಿಟಿ ಯೋಜನೆಯ ವಿಳಂಬವಾಗುತ್ತಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದು.

ಸ್ಮಾರ್ಟ್ ಸಿಟಿಯ ಯೋಜನೆಯ ಕಾಮಗಾರಿಗಳು ಸ್ಥಗಿತವಾಗಿವೆ. ಅಭಿವೃದ್ಧಿಯಾಗಿರುವ ಮೈದಾನ ರಸ್ತೆಗೆ ಮತ್ತೆ 7 ಕೋಟಿ ರೂ. ವ್ಯ ಮಾಡಲಾಗುತ್ತಿದೆ. ಇರುವ ಬಸ್ ತಂಗುದಾಣಗಳನ್ನು ಕೆಡವಿ ಲಕ್ಷಾಂತರ ರೂ. ಖರ್ಚು ಮಾಡಿ ಮತ್ತೆ ತಂಗುದಾಣ ನಿರ್ಮಿಸಲಾಗುತ್ತಿದೆ. ಪ್ರತ್ಯೇಕ ಆಡಳಿತ ನಿರ್ದೇಶಕರ ನೇಮಕವಾಗಲಿ ಎಂದು ಆಗ್ರಹಿಸಿದರು.

ಸಭೆಯಲ್ಲಿದ್ದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ ‘ ಸ್ಮಾರ್ಟ್ ಸಿಟಿ ಯೋಜನೆ ಪ್ರೈವೇಟ್ ಕಂಪೆನಿಯಂತಾಗಿದೆ. ಯಾವುದೇ ಕಾಮಗಾರಿ ಪೂರ್ಣವಾಗಿಲ್ಲ. ಹಣ ದುರುಪಯೋಗವಾಗುವ ಸಾಧ್ಯತೆ ಇದೆ. ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪಿಸಲಿದ್ದೇನೆ’ ಎಂದರು.

ಪ್ರತ್ಯೇಕ ಸಭೆ ನಡೆಸಿ ಮಾಹಿತಿ ನೀಡುವುದಾಗಿ ಮೇಯರ್ ಕೆ.ಭಾಸ್ಕರ್ ತಿಳಿಸಿದರೂ ಸದಸ್ಯರು ತೃಪ್ತರಾಗದೆ ಯೋಜನೆಯ ಪ್ರಭಾರ ಆಡಳಿತ ನಿರ್ದೇಶಕರಾಗಿರುವ ಮನಪಾ ಆಯುಕ್ತರು ಉತ್ತರಿಸಲಿ ಎಂದು ಆಗ್ರಹಿಸಿದರು.

ಆಯುಕ್ತ ಮುಹಮ್ಮದ್ ನಝೀರ್ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನಕ್ಕೆ 15 ಮಂದಿ ಸದಸ್ಯರ ಎಸ್‌ಪಿವಿ ಬೋರ್ಡ್ ರಚನೆಯಾಗಿದ್ದು, ಜಿಲ್ಲಾ ಕಾರ್ಯದರ್ಶಿ ಇದರ ಅಧ್ಯಕ್ಷರಾಗಿದ್ದಾರೆ. ಮೇಯರ್ ಸಹಿತ ಪಾಲಿಕೆಯ 6 ಸದಸ್ಯರು ಹಾಗೂ ಇತರ ಇಬ್ಬರು ಸದಸ್ಯರನ್ನು ನೇಮಿಸಲು ಮೇಯರ್‌ಗೆ ಅವಕಾಶವಿದೆ. ಈ ಪೈಕಿ 5 ಮಂದಿ ಪಾಲಿಕೆ ಸದಸ್ಯರ ನೇಮಕಾತಿ ನಡೆದಿದೆ. ರಾಜ್ಯ ಸರ್ಕಾರದ 6 ಹಾಗೂ ಕೇಂದ್ರ ಸರ್ಕಾರದ ಓರ್ವ ಸದಸ್ಯರು ಬೋರ್ಡ್‌ನಲ್ಲಿದ್ದಾರೆ. ಅನುಷ್ಠಾನ ಪರಿಶೀಲನಾ ಸಮಿತಿಗೆ ನಗರಾಭಿವೃದ್ಧಿ ಸಚಿವರು ಅಧ್ಯಕ್ಷರಾಗಿದ್ದು ಸಂಸದರು, ಶಾಸಕರು ಸಮಿತಿಯಲ್ಲಿದ್ದಾರೆ. ಸಲಹಾ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ಸಂಸದರು, ಶಾಸಕರು, ಮೇಯರ್ ಸದಸ್ಯರಾಗಿದ್ದಾರೆ ಎಂದು ಮನಪಾ ಆಯುಕ್ತ ಮಹಮ್ಮದ್ ನಝೀರ್ ಮಾಹಿತಿ ನೀಡಿದರು.

ಯೋಜನೆಯ ಕಾಮಗಾರಿಗಳು ಸ್ಥಗಿತವಾಗಿಲ್ಲ. ಪಾಲಿಕೆ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಬಸ್ ತಂಗುದಾಣ ರಚಿಸಲಾಗುತ್ತಿದೆ. ಮೈದಾನ ರಸ್ತೆಯ ಇಂಟರ್ ಲಾಕ್ ತೆಗೆದು ಕಾಂಕ್ರಿಟ್ ಹಾಕಲಾಗುತ್ತದೆ. ಈ ರಸ್ತೆಯ ಸಮಗ್ರ ಅಭಿವೃದ್ದಿಗೆ ಸುಮಾರು 6 ಕೋಟಿ ರೂ.ವೆಚ್ಚ ಮಾಡಲಾಗುತ್ತಿದೆ. ಇದರಲ್ಲಿ 1ಕೋಟಿ ರೂ.ವೆಚ್ಚದ 8 ಬಸ್ ತಂಗುದಾಣವಿದೆ. ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್, ಸೆಂಟ್ರಲ್ ಮಾರ್ಕೆಟ್ ಕಟ್ಟಡ, ಪಂಪ್‌ವೆಲ್ ಬಸ್ ನಿಲ್ದಾಣ ಯೋಜನೆಯಡಿ ಅನುಷ್ಠಾನವಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ಮನಪಾ ಉಪ ಮೇಯರ್ ಕೆ.ಮಹಮ್ಮದ್, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪ್ರವೀಣ್‌ಚಂದ್ರ ಆಳ್ವ, ಲತಾ ಸಾಲ್ಯಾನ್, ರಾಧಾಕೃಷ್ಣ, ನವೀನ್ ಡಿಸೋಜಾ, ಆಯುಕ್ತ ಮಹಮ್ಮದ್ ನಝೀರ್ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News