×
Ad

ಕೇಂದ್ರ ಸರ್ಕಾರ ವೈಫಲ್ಯ: ಅ. 1ರಂದು ಕಾಪುವಿನಲ್ಲಿ ಕಾಂಗ್ರೆಸ್ ಪ್ರತಿಭಟನೆ

Update: 2018-09-29 19:53 IST

ಕಾಪು, ಸೆ. 29: ಕೇಂದ್ರ ಸರಕಾರದ ಆಡಳಿತ ವೈಫಲ್ಯ ಖಂಡಿಸಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಅ. 1ರಂದು ಕಾಪು ಮತ್ತು ಹಿರಿಯಡಕದಲ್ಲಿ ಭೃಹತ್ ಪ್ರತಿಭಟನೆ ನಡೆಯಲಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ತಿಳಿಸಿದರು.

ಶನಿವಾರ ಕಾಪು ಪ್ರೆಸ್ ಕ್ಲಬ್‍ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ವಿವರ ನೀಡಿದ ಅವರು ಅಂದು ಬೆಳಗ್ಗೆ 10 ಗಂಟೆಗೆ ಕಾಪು ಪೇಟೆಯಲ್ಲಿ ಮತ್ತು ಮಧ್ಯಾಹ್ನ 3 ಗಂಟೆಗೆ ಹಿರಿಯಡಕ ಪೇಟೆಯಲ್ಲಿ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆಯಲ್ಲಿ ಪಕ್ಷದ ನಾಯಕರಾದ ಆಸ್ಕರ್ ಫೆರ್ನಾಂಡಿಸ್, ಮಾಜಿ ಶಾಸಕರಾದ ಪ್ರಮೋದ್ ಮಧ್ವರಾಜ್, ಗೋಪಾಲ್ ಭಂಡಾರಿ, ಗೋಪಾಲ್ ಪೂಜಾರಿ, ಜಿಲ್ಲಾಧ್ಯಕ್ಷ ಜನಾರ್ಧನ ತೋನ್ಸೆ ಸಹಿತ ಕೇಂದ್ರ, ರಾಜ್ಯ, ಜಿಲ್ಲೆ ಸಹಿತವಾಗಿ ಹಲವಾರು ನಾಯಕರುಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ದೇಶದಾದ್ಯಂತ ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆಯು ಗಗನಕ್ಕೇರಿದೆ. ಇದರಿಂದ ಜನ ಸಾಮಾನ್ಯರ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅಲ್ಲದೆ ರಫೆಲ್ ಯುದ್ಧ ವಿಮಾನ ಹಗರಣವು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ಸುತ್ತಿಕೊಂಡಿದೆ ಎಂದು ಅವರು ಹೇಳಿದರು. 

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‍ಚಂದ್ರ ಜೆ. ಶೆಟ್ಟಿ ಮಾತನಾಡಿ, ರಫೇಲ್ ಯುದ್ಧ ವಿಮಾನ ಹಗರಣದ ವಿರುದ್ಧ ಜೆ.ಪಿ.ಸಿ ತನಿಖೆಗೆ ಆಗ್ರಹಿಸಿ ಮಾಜಿ ಶಾಸಕ ವಿನಯಕುಮಾರ್ ಸೊರಕೆ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದ್ದು, ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 125 ಬೂತ್‍ಗಳಿಂದ ಬೂತ್‍ಗೆ 10 ಮಂದಿಯಂತೆ ಕಾರ್ಯಕರ್ತರು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. 

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‍ಚಂದ್ರ ಜೆ. ಶೆಟ್ಟಿ, ಜಿ.ಪಂ. ಸದಸ್ಯ ವಿಲ್ಸನ್ ರೊಡ್ರಿಗಸ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ, ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರಭಾವತಿ ಸಾಲ್ಯಾನ್, ತಾ.ಪಂ. ಸದಸ್ಯ ದಿನೇಶ್ ಕೋಟ್ಯಾನ್, ಕಾಪು ಪುರಸಭಾ ಅಧ್ಯಕ್ಷೆ ಮಾಲಿನಿ, ಉಪಾಧ್ಯಕ್ಷ ಕೆ.ಎಚ್. ಉಸ್ಮಾನ್, ಪ್ರಮುಖರಾದ ಅಮೀರ್ ಮಹಮ್ಮದ್, ಅಬ್ದುಲ್ ಅಜೀಜ್, ಶಾಂತಲತಾ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News