ಉಡುಪಿ: ಗ್ರಾಪಂ ಅಂಗಡಿಕೋಣೆಗಳ ಬಾಕಿ ಬಾಡಿಗೆ ವಸೂಲಿಗೆ ಕೆಡಿಪಿ ಸೂಚನೆ
ಉಡುಪಿ, ಸೆ.29: ಜಿಲ್ಲೆಯ ವಿವಿಧ ಗ್ರಾಪಂಗಳು ನಿರ್ಮಿಸಿರುವ ವಾಣಿಜ್ಯ ಸಂಕೀರ್ಣ ಮತ್ತು ಅಂಗಡಿ ಕಟ್ಟಡಗಳಲ್ಲಿ ಕಟ್ಟಡ ಬಾಡಿಗೆಗೆ ಪಡೆದಿರುವವರು ದೀರ್ಘಕಾಲದಿಂದ ಬಾಡಿಗೆ ಪಾವತಿಸದೆ ಬಾಕಿ ಇಟ್ಟಿರುವ ಮೊತ್ತವನ್ನು ತ್ವರಿತಗತಿಯಲ್ಲಿ ವಸೂಲು ಮಾಡಲು ಶನಿವಾರ ನಡೆದ ಉಡುಪಿ ಜಿಲ್ಲಾ ಮಾಸಿಕ ಕೆಡಿಪಿ ಸಭೆಯಲ್ಲಿ ಸೂಚನೆಗಳನ್ನು ನೀಡಲಾಗಿದೆ.
ಜಿಪಂ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಅವರು ಈ ವಿಷಯ ಪ್ರಸ್ತಾಪಿಸಿ ದರು. ಜಿಲ್ಲೆಯ ಗ್ರಾಪಂಗಳ ಅಧೀನದಲ್ಲಿರುವ ವಾಣಿಜ್ಯ ಸಂಕೀರ್ಣ ಹಾಗೂ ಅಂಗಡಿಕೋಣೆಗಳನ್ನು ಬಾಡಿಗೆಗೆ ಪಡೆದಿರುವವರು ದೀರ್ಘ ಕಾಲದಿಂದ ಬಾಡಿಗೆ ಪಾವತಿಸದೆ ಸರಕಾರಕ್ಕೆ ಬಾಕಿ ಇರಿಸಿದ್ದಾರೆ. ಇದರಿಂದ ಗ್ರಾಪಂಗಳಿಗೆ ನಿರೀಕ್ಷಿತ ಆದಾಯ ಖೋತಾ ಆಗುತ್ತಿದೆ. ಅಲ್ಲದೇ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೂ ಸೂಕ್ತ ಹಣಕಾಸು ದೊರಕದೆ ಅಡಚಣೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಗ್ರಾಪಂಗಳು ತಮ್ಮ ವ್ಯಾಪ್ತಿಯ ವಾಣಿಜ್ಯ ಕಟ್ಟಡ ಗಳನ್ನು ಬಾಡಿಗೆಗೆ ಪಡೆದಿರುವವರಿಂದ ಬಾಕಿ ಇರಿಸಿಕೊಂಡ ಬಾಡಿಗೆಯ ವಸೂಲಾತಿಗೆ ಕ್ರಮ ಕೈಗೊಳ್ಳಬೇಕು ಎಂದು ಉಪಾಧ್ಯಕ್ಷರು ತಿಳಿಸಿದರು.
ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿಯಂತ್ರಣಕ್ಕೆ ಹಲವು ಸೂಚನೆ ಹಾಗೂ ಆದೇಶಗಳನ್ನು ನೀಡಲಾಗಿದೆ. ಆದರೂ ಇದರ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಸರಕಾರಿ ಸಭೆ ಸಮಾರಂಗಳಲ್ಲಿ ಪ್ಲಾಸ್ಟಿಕ್ ಬಾಟಲಿಂದ ನೀರು ಪೂರೈಕೆ ಮಾಡಿ, ಅದರ ಬಿಲ್ಲು ಪಾವತಿಸಿದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿ.ಪಂ. ಅಧ್ಯಕ್ಷ ದಿನಕರ ಬಾಬು ತಿಳಿಸಿದರು.
ಕುಡಿಯುವ ನೀರಿನ ಯೋಜನೆಗಳಿಗೆ ಸಾಕಷ್ಟು ಅನುದಾನ ಲಭ್ಯವಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಕುಡಿಯುವ ನೀರಿನ ಕಾಮಗಾರಿಗಳನ್ನು ತ್ವರಿತವಾಗಿ ಪ್ರಾರಂಭಿಸಬೇಕು. ಇದರಲ್ಲಿ ವಿಳಂಬ ಮಾಡಬಾರದು ಎಂದು ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ತಿಳಿಸಿದರು.
ಗಂಗಾ ಕಲ್ಯಾಣ ಯೋಜನೆಯಲ್ಲಿ ವಿಳಂಬ ತಪ್ಪಿಸಲು ಮೆಸ್ಕಾಂ ಹಾಗೂ ಸಂಬಂಧ ಪಟ್ಟ ನಿಗಮಗಳ ಸಮನ್ವಯ ಸಮಿತಿ ಸಭೆಯನ್ನು ಜಿಲ್ಲಾ ಮಟ್ಟದಲ್ಲಿ ನಡೆಸಲಾಗುವುದು. ವಿಕಲಚೇತನರ ಪ್ರಗತಿಗಾಗಿ ಮೀಸಲಾದ ಶೇ.3ರ ಅನುದಾನದ ಪ್ರಗತಿಯ ಮಾಹಿತಿಯನ್ನು ಎಲ್ಲಾ ಇಲಾಖೆಗಳು ತಪ್ಪದೇ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.
ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಸ್ಥಾಯಿ ಸಮಿತಿ ಅದ್ಯಕ್ಷರಾದ ಬಾಬು ಶೆಟ್ಟಿ, ಉದಯ ಕೋಟ್ಯಾನ್, ಶಶಿಕಾಂತ ಪಡುಬಿದ್ರೆ ಮತ್ತಿತರರು ಹಾಜರಿದ್ದರು.