×
Ad

ಹೊಸ ಅನುಮೋದಿತ ಕರಾವಳಿ ವಲಯ ನಿರ್ವಹಣಾ ನಕ್ಷೆ ಸಿದ್ಧ

Update: 2018-09-29 20:12 IST

ಉಡುಪಿ, ಸೆ. 29: ಕರಾವಳಿ ನಿಯಂತ್ರಣಾ ವಲಯ ಅಧಿಸೂಚನೆ 2011 ರಂತೆ ಕರಾವಳಿ ವಲಯ ನಿರ್ವಹಣಾ ನಕ್ಷೆಯನ್ನು ಕರ್ನಾಟಕ ಸರಕಾರ ಸಿದ್ಧ ಪಡಿಸಿದ್ದು, ಈ ನಕ್ಷೆಗೆ ಕೇಂದ್ರ ಸರಕಾರ ಜು.18ರಂದು ತಾತ್ವಿಕ ಅನುಮೋದನೆ ಹಾಗೂ ಆ.16ರಂದು ಅಧಿಕೃತ ಅನುಮೋದನೆಯನ್ನು ನೀಡಿದೆ. ಈ ನಕ್ಷೆಯನ್ನು ಕೇಂದ್ರ ಸರಕಾರ ಸೆ.19ರಂದು ಅನುಮೋದಿಸಿದ್ದು, ಸೆ.27ರಂದು ಅನುಮೋದಿತ ನಕ್ಷೆ ಪ್ರಾದೇಶಿಕ ನಿರ್ದೇಶಕರ ಕಚೇರಿಗೆ ಬಂದಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಸಿಆರ್‌ಝಡ್ ಅಧಿಸೂಚನೆ 2011ರಂತೆ ಹೊಸ ನಕ್ಷೆಯನ್ನು ರಾಜ್ಯ ಸರಕಾರಗಳು ಸಿದ್ಧಪಡಿಸಿಕೊಳ್ಳದೇ 1996ರ ಹಳೆ ನಕ್ಷೆಯಂತೆ ಅನುಮೋದನೆ ನೀಡುತಿದ್ದವು. ಇದರ ವಿರುದ್ಧ ಕೇಂದ್ರ ಹಸಿರು ನ್ಯಾಯ ಪೀಠ 2017ರಲ್ಲಿ ತೀರ್ಪು ನೀಡಿದ್ದು, ಈ ತೀರ್ಪಿನಲ್ಲಿ ಕರಾವಳಿ ರಾಜ್ಯಗಳು ಸಿಆರ್‌ಝಡ್ ನಕ್ಷೆಯನ್ನು 2018ರ ಎಪ್ರಿಲ್ ಒಳಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ, ಜುಲೈ ತಿಂಗಳ ಒಳಗೆ ಕೇಂದ್ರ ಸರ್ಕಾರದ ಅನುಮೋದನೆ ಪಡೆಯುವುದನ್ನು ಕಡ್ಡಾಯಗೊಳಿಸಿ ಆದೇಶಿಸಿತ್ತು.

ಅದರಂತೆ ಕರ್ನಾಟಕ ಸರಕಾರ ಚೆನ್ನೈಯ ಎನ್‌ಸಿಎಸ್‌ಸಿಎಂನಿಂದ ಕರಡು ನಕ್ಷೆ ತಯಾರಿಸಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ, ನಂತರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಅಹವಾಲು ಸಭೆಯನ್ನು ನಡೆಸಿ, ಸಾರ್ವಜನಿಕರು ನೀಡಿದ ಎಲ್ಲಾ ಅಹವಾಲುಗಳನ್ನು ಪರಿಶೀಲಿಸಿ ಅದರಂತೆ ನಕ್ಷೆಯಲ್ಲಿ ಸೂಕ್ತ ಮಾರ್ಪಾಡುಗಳನ್ನು ತಂದು, ನಂತರ ರಾಜ್ಯ ಸರಕಾರದಿಂದ ಅನುಮೋದನೆಗೊಂಡು ಹಸಿರು ನ್ಯಾಯಪೀಠ ನೀಡಿದ ಗಡುವಿನ ಒಳಗೆ ರಾಜ್ಯ ಸರಕಾರ ಹೊಸ ಕರಡು ನಕ್ಷೆಯನ್ನು ಕೇಂದ್ರ ಸರಕಾರದ ಅನುಮೋದನೆ ಪಡೆಯಲು ಸಲ್ಲಿಸಿತ್ತು.

ದ.ಕ.ದ 46, ಉಡುಪಿಯ 23 ಗ್ರಾಮಗಳು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಆರ್‌ಝಡ್-2ರ ವ್ಯಾಪ್ತಿಯಲ್ಲಿ ಹಳೆ ನಕ್ಷೆ ಯಂತೆ 19 ಗ್ರಾಮಗಳಿದ್ದು, ಹೊಸ ನಕ್ಷೆ ಪ್ರಕಾರ 27 ಗ್ರಾಮಗಳು ಹೊಸದಾಗಿ ಸೇರ್ಪಡೆಗೊಂಡು ಒಟ್ಟು 46 ಗ್ರಾಮಗಳನ್ನು ಸಿಆರ್‌ಝಡ್-2ರ ಪ್ರದೇಶವಾಗಿ ಸೇರ್ಪಡೆಗೊಳಿಸಿ ಕರಾವಳಿಯ ಅಭಿವೃದ್ಧಿಗೆ ಅನುಕೂಲವಾಗುವ ರೀತಿಯಲ್ಲಿ ಮಾರ್ಪಾಡನ್ನು ಮಾಡಲಾಗಿದೆ. ಅಂದರೆ ದಕ್ಷಿಣ ಕನ್ನಡ ಜಿಲ್ಲೆಯ ಶೇ.95 ರಷ್ಟು ಸಿಆರ್‌ಝಡ್ ಪ್ರದೇಶ ಅಭಿವೃದ್ಧಿಗೆ ಪೂರಕವಾಗಿ ಮಾರ್ಪಾಡು ಮಾಡಲಾ ಗಿದೆ.

ಅದೇ ರೀತಿ ಉಡುಪಿ ಜಿಲ್ಲೆಯ ಸಿಆರ್‌ಝಡ್-2ರ ಪ್ರದೇಶದಲ್ಲಿ ಹಿಂದಿನ ನಕ್ಷೆಯಂತೆ 5 ಗ್ರಾಮಗಳು ಮಾತ್ರ ಇದ್ದು, ಹೊಸತಾಗಿ 18 ಗ್ರಾಮಗಳು ಸೇರ್ಪಡೆಗೊಂಡಿವೆ. ಇದರಿಂದ ಒಟ್ಟು 23 ಗ್ರಾಮಗಳನ್ನು ಅಭಿವೃದ್ದಿಗೆ ಪೂರಕವಾದ ಪ್ರದೇಶಗಳನ್ನಾಗಿ ಘೋಷಿಸಲಾಗಿದೆ. ಅಂದರೆ ಉಡುಪಿ ಜಿಲ್ಲೆಯ ಶೇ.12-20ರಷ್ಟು ಪ್ರದೇಶಗಳನ್ನು ಅಭಿವೃದ್ಧಿಗೆ ಪೂರಕವಾಗಿ ಮಾರ್ಪಾಡು ಮಾಡಲಾಗಿದೆ.

ನದಿ ಪಾತ್ರಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ನದಿಯಲ್ಲಿ ತುಂಬೆ ಆಣೆಕಟ್ಟಿನವರೆಗೆ, ಗುರುಪುರ ನದಿಯಲ್ಲಿ ಮಳವೂರು ಕಿಂಡಿ ಆಣೆಕಟ್ಟಿನವರೆಗೆ, ನಂದಿನಿ ನದಿಯಲ್ಲಿ ಚೇಳ್ಯಾರುವರೆಗೆ ಹಾಗೂ ಶಾಂಭವಿ ನದಿಯಲ್ಲಿ ಕರ್ನಿರೆ ವರೆಗೆ ನದಿ ಪಾತ್ರದ ಕರಾವಳಿ ನಿಯಂತ್ರಣ ವಲಯದ ಮಿತಿ ಇರುತ್ತದೆ.

ಉಡುಪಿ ಜಿಲ್ಲೆಯಲ್ಲಿ ಉದ್ಯಾವರ ನದಿ ಪಾತ್ರದಲ್ಲಿ ಮಣಿಪುರ- ಕುರ್ಕಾಲ್ ಅಣೆಕಟ್ಟು, ಸ್ವರ್ಣ ನದಿಯಲ್ಲಿ ಬಜೆ ಅಣೆಕಟ್ಟು, ಸೀತಾ ನದಿಯಲ್ಲಿ ಹನೆಹಳ್ಳಿ ಅಣೆಕಟ್ಟು, ವಾರಾಹಿ ನದಿಯಲ್ಲಿ ಬಸ್ರೂರು ಅಣೆಕಟ್ಟು, ಚಕ್ರಾ ನದಿಯಲ್ಲಿ ಹೆಮ್ಮಾಡಿವರೆಗೆ, ಸೌಪರ್ಣಿಕ ನದಿಯಲ್ಲಿ ಸೇನಾಪುರ ಕಿಂಡಿ ಅಣೆಕಟ್ಟಿನವರೆಗೆ, ಯಡಮಾವಿನ ಹೊಳೆಯಲ್ಲಿ ಕಿರಿಮಂಜೇಶ್ವರ- ಹೆರಂಜಾಲುವರೆಗೆ ಹಾಗೂ ಬೈಂದೂರು ಹೊಳೆಯಲ್ಲಿ ಬೀಜೂರು ತೆಗೆಸ್ಸೆರೆ ಕಿಂಡಿ ಆಣೆಕಟ್ಟಿನವರೆಗೆ ನದಿ ಪಾತ್ರದ ಕರಾವಳಿ ನಿಯಂತ್ರಣ ವಲಯ ಮಿತಿ ಇರುತ್ತದೆ.

ಕೇಂದ್ರ ಹಸಿರು ನ್ಯಾಯಪೀಠದ ಆದೇಶಾನುಸಾರ ಕರಾವಳಿ ನಿಯಂತ್ರಣ ವಲಯ ಅಧಿಸೂಚನೆಯಲ್ಲಿ ಸೂಚಿಸಿರುವ ಎಲ್ಲಾ ಮಾರ್ಗಸೂಚಿಗಳನ್ನು ಅಳವಡಿಸಲು ಸೂಚಿಸಿರುವ ಮೇರೆಗೆ ಪರಿಸರ ಸೂಕ್ಷ್ಮ ವಲಯಗಳು ಹಾಗೂ ಪರಿಸರ ಅತೀ ಸೂಕ್ಷ್ಮ ವಲಯಗಳು ಸಹ ಅಧಿಸೂಚನೆಯಲ್ಲಿವೆ. ಅಲ್ಲದೇ ಮಾರ್ಗಸೂಚಿಯಂತೆ ಅವುಗಳನ್ನು ನಕ್ಷೆಯಲ್ಲಿ ತೋರಿಸಲಾಗಿದೆ.

ಅದರಂತೆ ಇನ್ನು ಮುಂದೆ ಕರಾವಳಿ ನಿಯಂತ್ರಣ ವಲಯ ವ್ಯಾಪ್ತಿಯಲ್ಲಿ ಬರುವಂತಹ ಯಾವುದೇ ಪ್ರಕರಣಗಳನ್ನು ಪರಿಶೀಲಿಸಬೇಕಾದಲ್ಲಿ ಕೇಂದ್ರ ಸರಕಾರದಿಂದ ಅನುಮೋದನೆಗೊಂಡಿರುವ ನಕ್ಷೆಯಂತೆ ಹಾಗೂ ಅಧಿಸೂಚನೆ ಪ್ರಕಾರವಾಗಿಯೇ ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳಬೇಕಾಗಿದೆ.

ನಕ್ಷೆಯ ವೈಶಿಷ್ಟತೆಗಳು

ಪ್ರಪ್ರಥಮವಾಗಿ ವಿಕೋಪ ರೇಖೆಯನ್ನು ಅಳವಡಿಸಲಾಗಿದೆ. ಜಿಯೋರೆಪರೆನ್ಸ್‌ಡ್ ಗ್ರಾಮ ನಕ್ಷೆಗಳನ್ನು ಅಳವಡಿಸಿ ಅದರ ಮೇಲೆ ಕರಾವಳಿ ನಿಯಂತ್ರಣ ವಲಯ ನಕ್ಷೆಯನ್ನು ಅಳವಡಿಸಲಾಗಿದೆ. ಗ್ರಾಮ, ತಾಲೂಕು ಮತ್ತು ಜಿಲ್ಲಾ ಗಡಿರೇಖೆಗಳ ಜೊತೆಗೆ ಸ್ಥಳೀಯ ಯೋಜನಾ ಪ್ರದೇಶಗಳ ಗಡಿರೇಖೆಗಳನ್ನು ಸಹ ಅಳವಡಿಸಲಾಗಿದೆ. ಮೀನುಗಾರಿಕಾ ಮೂಲಭೂತ ಸೌಕರ್ಯಗಳನ್ನು ಗುರುತಿಸಲಾಗಿದೆ. ಮೀನಿನ ಸಂತಾನೋತ್ಪತ್ತಿ ಪ್ರದೇಶಗಳು ಹಾಗೂ ಸೂಕ್ಷ್ಮ ವಲಯಗಳನ್ನು ಹೊಸತಾಗಿ ಗುರುತಿಸಲಾಗಿದೆ. ನದಿ ಪಾತ್ರದ ಸಿಆರ್‌ಝಡ್ ಮಿತಿಯನ್ನು ಹಲವು ಕಡೆ ಕಡಿಮೆಗೊಳಿಸಲಾಗಿದೆ.

ಹೀಗೆ ಅನುಮೋದನೆಗೊಂಡಿರುವ ನಕ್ಷೆಯಲ್ಲಿ ಕರಾವಳಿ ವಲಯಗಳಲ್ಲಿ ಅಭಿವೃದ್ಧಿಗೆ ಪೂರಕವಾಗುವಂತೆ ಕರಾವಳಿ ನಿಯಂತ್ರಣ ವಲಯಗಳನ್ನು ಮಾರ್ಪಾಡು ಮಾಡಲಾಗಿದೆ. ಹಾಗೂ ಈ ಹಿಂದೆ ನಕ್ಷೆಯಲ್ಲಿ ಬಿಟ್ಟು ಹೋಗಿದ್ದ ಸೂಕ್ಷ್ಮ ವಲಯ ಮತ್ತು ಅತಿ ಸೂಕ್ಷ್ಮ ವಲಯಗಳನ್ನು ಹಾಗೂ ಕೇಂದ್ರ ಹಸಿರು ಪೀಠ ನಿರ್ದೇಶನದಂತೆ ಅಳವಡಿಸಿ ಸಂರಕ್ಷಣೆಯ ಹಿತದೃಷ್ಟಿಯಿಂದಲೂ ಸಹ ಕ್ರಮವಹಿಸಲಾಗಿದೆ ಎಂದು ಉಡುಪಿ ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಪ್ರಾದೇಶಿಕ ನಿದೇಶರ್ಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News