×
Ad

ನಾಟಕಗಳಿಂದ ಸಮಾಜದ ಮನಪರಿವರ್ತನೆ ಸಾಧ್ಯ: ಪ್ರಿಯಾಂಕ

Update: 2018-09-29 20:16 IST

ಉಡುಪಿ, ಸೆ.29: ಬೀದಿನಾಟಕ ಸಮಾಜದ ಜ್ವಲಂತ ಸಮಸ್ಯೆಗಳನ್ನು ಎತ್ತಿ ತೋರಿಸುವ ಮೂಲಕ ಆಡುವವರಂತೆ, ನೋಡುವವರಿಗೂ ವಿಷಯ ಮನದಟ್ಟು ಮಾಡಬೇಕು. ಸಮಾಜದ ಮನ ಪರಿವರ್ತನೆಯಾಗುವಂತೆ ಮಾಡಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.

ಉಡುಪಿಯ ಎಂಜಿಎಂ ಕಾಲೇಜಿನ ಎನ್ನೆಸ್ಸೆಸ್ ಘಟಕ 1 ಮತ್ತು 2 ಆಯೋಜಿಸಿರುವ ಅಂತರ ಕಾಲೇಜು ಮಟ್ಟದ ಎನ್ನೆಸ್ಸೆಸ್ ವಿದ್ಯಾರ್ಥಿಗಳ ಬೀದಿ ನಾಟಕ ಸ್ಪರ್ಧೆ ‘ಯುವಾಗಮ-18’ನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕಲೆ ಹಾಗೂ ರಂಗಭೂಮಿಗೆ ಸಮಾಜದಲ್ಲಿರುವ ಸಮಸ್ಯೆಗಳನ್ನು ಮನದಟ್ಟು ಮಾಡುವ ಸಾಮರ್ಥ್ಯವಿದೆ. ವಿಷಯವನ್ನು ಮನದಟ್ಟು ಮಾಡುವ ಮೂಲಕ ಕಲೆ ತನ್ನ ಉದ್ದೇಶವನ್ನು ಈಡೇರಿಸಿಕೊಂಡಂತಾಗುತ್ತದೆ. ಮಾದಕ ದ್ರವ್ಯ ವ್ಯಸನ ಇಂದು ಬಹುದೊಡ್ಡ ಸಾಮಾಜಿಕ ಪಿಡುಗಾಗಿದೆ. ಸೃಜನಶೀಲ ವ್ಯಕ್ತಿಗಳಲ್ಲಿ ಮಾದಕ ದ್ರವ್ಯದ ಕುರಿತಂತೆ ಕೆಲವು ತಪ್ಪು ಅಭಿಪ್ರಾಯಗಳಿವೆ. ಅವುಗಳನ್ನು ಬೀದಿ ನಾಟಕಗಳು ಎತ್ತಿ ತೋರಿಸಬೇಕು ಎಂದವರು ಹೇಳಿದರು.

ಅನಿಷ್ಟ ಪಿಡುಗುಗಳಿಂದ ಯುವ ಜನತೆ ಸಂಪೂರ್ಣ ಹೊರಬಂದರೆ, ಅವರಿಂದ ಒಳ್ಳೆಯ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಈ ಬೀದಿ ನಾಟಕ ಸ್ಪರ್ಧೆ ಜಾಗೃತಿ ಮೂಡಿಸಲಿ ಎಂದರು.

ಆಶಯ ನುಡಿಗಳನ್ನಾಡಿದ ಶಿಕ್ಷಕ ಹಾಗೂ ಖ್ಯಾತ ರಂಗಕರ್ಮಿ ಡಾ.ಶ್ರೀಪಾದ ಭಟ್, ಶಿಕ್ಷಣಕ್ಕೆ ಸಾಮಾಜಿಕ ಸ್ವರೂಪವಿದೆ. ಶಿಕ್ಷಣ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಮರೆತರೆ ಓದಿದವರಿಗೂ, ಓದದವರಿಗೂ ಯಾವುದೇ ವ್ಯತ್ಯಾಸವಿರುವುದಿಲ್ಲ. ರಂಗಭೂಮಿ ಸಮಾಜದಲ್ಲಿ ಆಗಬೇಕಾದ ಬದಲಾವಣೆಯ ಕುರಿತಂತೆ ಕೆಲಸ ಮಾಡುತ್ತದೆ. ದುರ್ಯೋಧನನಂತೆ ಎಲ್ಲರಿಗೂ ಬೀದಿಗೆ ಬಂದಾಗಲೇ ವಾಸ್ತವದ ಅರಿವಾಗುತ್ತದೆ. ಸತ್ಯವನ್ನು ದರ್ಶಿಸುವ ಬಹುದೊಡ್ಡ ಸ್ವರೂಪವನ್ನು ಬೀದಿ ನಾಟಕ ತಂದುಕೊಟ್ಟಿದೆ ಎಂದರು.

ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಜಿ.ವಿಜಯ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮುಖ್ಯ ಅತಿಥಿಯಾಗಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ರಮೇಶ್ ಕಾರ್ಲ ಉಪಸ್ಥಿತರಿದ್ದರು. ಎಂಜಿಎಂ ಕಾಲೇಜಿನ ಎನ್ನೆಸ್ಸೆಸ್ ಎರಡನೇ ಘಟಕದ ಯೋಜನಾಧಿಕಾರಿ ಪ್ರಿಯಾಶ್ರೀ ಕೆ.ಟಿ. ಅತಿಥಿಗಳನ್ನು ಸ್ವಾತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News