×
Ad

ಉಗ್ರ ಮಸೂದ್ ಅಝರ್‌ನನ್ನು ಸಮರ್ಥಿಸಿಕೊಂಡ ಚೀನಾ

Update: 2018-09-29 20:20 IST

ವಿಶ್ವಸಂಸ್ಥೆ, ಸೆ. 29: ಪಾಕಿಸ್ತಾನದ ಜೈಶೆ (ಜೆಇಎಂ) ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್‌ನನ್ನು ವಿಶ್ವಸಂಸ್ಥೆಯ ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನಗಳಿಗೆ ಚೀನಾ ಪದೇ ಪದೇ ವಿಘ್ನ ಉಂಟು ಮಾಡುತ್ತಿರುವುದನ್ನು ಆ ದೇಶದ ವಿದೇಶ ಸಚಿವ ವಾಂಗ್ ಯಿ ಸಮರ್ಥಿಸಿಕೊಂಡಿದ್ದಾರೆ.

ಭಯೋತ್ಪಾದಕನನ್ನು ಸಮರ್ಥಿಸಿಕೊಂಡ ವಾಂಗ್ ಯಿ, ಈ ವಿಷಯದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸದಸ್ಯರ ನಡುವೆ ಹಾಗೂ ‘ನೇರವಾಗಿ ಸಂಬಂಧಪಟ್ಟ’ ಪಕ್ಷಗಳಾದ ಭಾರತ ಮತ್ತು ಪಾಕಿಸ್ತಾನಗಳ ನಡುವೆ ‘ಒಮ್ಮತ’ವಿಲ್ಲ ಎಂದು ಹೇಳಿದ್ದಾರೆ.

ಮಸೂದ್ ಅಝರ್, 2016ರಲ್ಲಿ ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿರುವ ಸೇನಾ ನೆಲೆಯ ಮೇಲೆ ನಡೆದ ದಾಳಿಯೂ ಸೇರಿದಂತೆ, ಭಾರತದಲ್ಲಿ ನಡೆದ ಹಲವಾರು ಭಯೋತ್ಪಾದಕ ದಾಳಿಯ ಸೂತ್ರಧಾರಿಯಾಗಿದ್ದಾನೆ.

ಉರಿ ದಾಳಿಯಲ್ಲಿ 17 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ, ವೀಟೊ ಹೊಂದಿರುವ ಖಾಯಂ ಸದಸ್ಯರ ಪೈಕಿ ಒಂದಾಗಿರುವ ಚೀನಾ, ಅಝರ್‌ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ವಿಶ್ವಸಂಸ್ಥೆಯಲ್ಲಿನ ಭಾರತದ ಪ್ರಯತ್ನಗಳನ್ನು ಪದೇ ಪದೇ ವಿಫಲಗೊಳಿಸುತ್ತಾ ಬಂದಿರುವುದನ್ನು ಸ್ಮರಿಸಬಹುದಾಗಿದೆ.

ಈ ವಿಷಯದಲ್ಲಿ ಭಾರತದ ನಿಲುವನ್ನು ಪಾಕಿಸ್ತಾನ ಒಪ್ಪದಿರುವ ಹಿನ್ನೆಲೆಯಲ್ಲಿ, ನೇರವಾಗಿ ಸಂಬಂಧಪಟ್ಟ ಪಕ್ಷಗಳ ನಡುವೆ ‘ಸಹಮತ’ವಿಲ್ಲ ಎಂದು ಚೀನಾ ತನ್ನ ಹೇಳಿಕೆಯಲ್ಲಿ ಹೇಳಿಕೊಂಡಿದೆ. ಭಾರತದ ನಿಲುವಿಗೆ ಪಾಕಿಸ್ತಾನ ಒಪ್ಪಿದರೆ ಮಾತ್ರ, ಭಾರತದ ಪ್ರಯತ್ನಗಳಿಗೆ ಬೆಂಬಲ ನೀಡುವುದಾಗಿ ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News