×
Ad

ಕೊಂಕಣ ರೈಲು ನಿಲ್ದಾಣ; ಪ್ರಯಾಣಿಕರಿಗೆ ಹೀಗೊಂದು ಸ್ವಚ್ಛತೆ ಪಾಠ

Update: 2018-09-29 20:24 IST

ಉಡುಪಿ, ಸೆ. 29: ದೇಶದಲ್ಲಿ ಇಂದು ಸ್ವಚ್ಛತೆಯ ಕುರಿತಂತೆ ಜನರಲ್ಲಿ ಭಾರೀ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಕೇಂದ್ರ ಸರಕಾರದ ನೇತೃತ್ವದಲ್ಲಿ ಇದಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ದಿನ ಬೆಳಗಾದರೆ ಅಲ್ಲಲ್ಲಿ ಸ್ವಚ್ಛತಾ ಅಭಿಯಾನ ನಡೆಯುತ್ತಿರುತ್ತದೆ.

ಆದರೆ ಇಂದು ಅಪರಾಹ್ನ ಉಡುಪಿಯ ಕೊಂಕಣ ರೈಲ್ವೆ ನಿಲ್ದಾಣದಲ್ಲಿ ಕಂಡು ಬಂದ ದೃಶ್ಯ ಮಾತ್ರ ವಿಭಿನ್ನ. ಉಡುಪಿ ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ಶನಿವಾರ ಕಸ ಬಿಸಾಡಿದ ಪ್ರಯಾಣಿಕರ ವಿರುದ್ಧ ಸಿಬ್ಬಂದಿ ಕ್ರಮ ಜರಗಿಸಲು ಮುಂದಾದಾಗ ನಡೆದ ಮಾತಿನ ಚಕಮಕಿ ಸಂದರ್ಭ ಉಳಿದ ಪ್ರಯಾಣಿಕರು ಭದ್ರತಾ ಸಿಬ್ಬಂದಿಯನ್ನು ಕರೆತಂದ ಘಟನೆ ನಡೆಯಿತು.

ಆದರೆ ಇದು ನಡೆದಿದ್ದು ರೈಲು ಪ್ರಯಾಣಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಕಾರ್ಯಕ್ರಮದ ಒಂದು ಭಾಗವಾಗಿ....

ಉಡುಪಿಗೆ ಎ.ಸಿ.ಕೋಚ್‌ನಲ್ಲಿ ಬಂದ ಪ್ರಯಾಣಿಕರು ಪ್ಲಾಟ್‌ಫಾರಂನಲ್ಲಿ ಕಸ ಬಿಸಾಡಿದಾಗ ಸಿಬ್ಬಂದಿ ವಿರೋಧಿಸಿದರು. ಆಗ ಪ್ರಯಾಣಿಕರು ‘ನಾವು ಸ್ವಚ್ಛ ಭಾರತ್ ತೆರಿಗೆ ಕೊಡುತ್ತೇವೆ. ಸ್ವಚ್ಛತೆ ಕೆಲಸ ನಮ್ಮದಲ್ಲ. ರೈಲ್ವೆಯವರೇ ಮಾಡಬೇಕು’ ಎಂದು ಉತ್ತರಿಸಿದರು.

ಆಗ ಸಿಬ್ಬಂದಿ ನಾವು ಪ್ರಧಾನಿಯವರ ಸ್ವಚ್ಛತಾ ಅಭಿಯಾನದ ಅಂಗವಾಗಿ ಕರ್ತವ್ಯ ನಿರ್ವಹಿಸುತ್ತೇವೆ. ನಿಮ್ಮ ವಿರುದ್ಧ ಪ್ರಕರಣ ದಾಖಲಿಸುತ್ತೇವೆ, ದಂಡ ತೆರಬೇಕು ಎಂದು ಗುಡುಗಿದರು. ‘ನಾವು ವಿದೇಶದ ಪ್ರಯಾಣಿಕರು. ಭಾರತದಲ್ಲಿಯೂ ಇಷ್ಟು ಸ್ವಚ್ಛತೆ ಇದೆ ಎಂದು ಗೊತ್ತಿರಲಿಲ್ಲ. ದಂಡ ಶುಲ್ಕ ತೆರುತ್ತೇವೆ’ ಎಂದು ಹೇಳಿ ಬಿಸಾಡಿದ ಕಸವನ್ನು ತೆಗೆದು ಸ್ವಚ್ಛೊಳಿಸಿದರು.

ರೈಲ್ವೆ ಇಲಾಖೆ ಸ್ವಚ್ಛತೆ ಜಾಗೃತಿಗಾಗಿ ನಡೆಸುತ್ತಿರುವ ಸ್ವಚ್ಛತಾ ಪಾಕ್ಷಿಕದ ಅಂಗವಾಗಿ ಇಂದ್ರಾಳಿ ಕೊಂಕಣ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಸಿಬ್ಬಂದಿ ಪ್ರದರ್ಶಿಸಿದ ಈ ಬೀದಿ ನಾಟಕದಲ್ಲಿ ಮಾತಿನ ಚಕಮಕಿಯನ್ನು ಕಂಡು ಪ್ರಯಾಣಿಕರು ಇದು ನಿಜವೆಂದೇ ನಂಬಿ ಭದ್ರತಾ ಅಧಿಕಾರಿಗಳನ್ನು ಕರೆತರಲು ಮುಂದಾದರು.

ಕೊಂಕಣ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ನೇತೃತ್ವದಲ್ಲಿ ನಡೆದ ಬೀದಿ ನಾಟಕದಲ್ಲಿ ಮಂಗಳೂರಿನ ಪ್ರಾದೇಶಿಕ ಸಂಚಾರಿ ವ್ಯವಸ್ಥಾಪಕ ಎಸ್.ವಿನಯಕುಮಾರ್, ದಿವಾಕರ ಶೆಟ್ಟಿ, ಮಹಾದೇವ ಶೆಟ್ಟಿ, ನಳಿನಾ ಶೆಟ್ಟಿ, ಪದ್ಮಾ ರಾವ್, ಶಾಲಿನಿ ನಾಯಕ್, ಜಗದೀಶ, ಗಿರೀಶ್, ಆಸ್ಟಿನ್, ಚಿಕ್ಕಯ್ಯ, ಮಧುಕುಮಾರ ಶೆಟ್ಟಿ ಮೊದಲಾದವರು ಪಾಲ್ಗೊಂಡರು.

ಅರ್ಧ ಗಂಟೆ ನಿಲ್ದಾಣದಲ್ಲಿ ಸ್ವಚ್ಛತೆಗೆ ಸಂಬಂಧಿಸಿ ಈ ಬೀದಿ ನಾಟಕ ನಡೆಯಿತು. ಸ್ವಚ್ಛತಾಧಿಕಾರಿಗಳಾದ ಉಪ ಮುಖ್ಯ ವೈದ್ಯಾಧಿಕಾರಿ ಡಾ. ಸ್ಟೀವನ್ ಜಾರ್ಜ್ ಸ್ವಚ್ಛತೆ ಕುರಿತು ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News