×
Ad

ಪದವಿ ಮಟ್ಟದಲ್ಲಿ ಆಯ್ಕೆ ಆಧಾರಿತ ಶ್ರೇಯಾಂಕ ಪದ್ಧತಿ: ಕುಲಸಚಿವ ಡಾ. ಖಾನ್ ಮಾಹಿತಿ

Update: 2018-09-29 22:44 IST

ಮಂಗಳೂರು, ಸೆ.29: ವಿಶ್ವವಿದ್ಯಾಲಯದ ಅನುದಾನ ಆಯೋಗ(ಯುಜಿಸಿ)ದ ಸೂಚನೆಯಂತೆ ಪದವಿ ಮಟ್ಟದಲ್ಲೂ ಆಯ್ಕೆ ಆಧಾರಿತ ಶ್ರೇಯಾಂಕ ಪದ್ಧತಿ (ಸಿಬಿಸಿಎಸ್)ಯನ್ನು ಮುಂದಿನ ಶೈಕ್ಷಣಿಕ ಸಾಲಿನಿಂದ ಅಳವಡಿಸಲಾಗುವುದು ಎಂದು ಮಂಗಳೂರು ವಿವಿಯ ಕುಲಸಚಿವ ಡಾ.ಎ.ಎಂ. ಖಾನ್ ಹೇಳಿದರು.

ಮಂಗಳೂರು ವಿವಿಯ ಹೊಸ ಸೆನೆಟ್ ಸದನದಲ್ಲಿ 2018-19ರ ಸಾಲಿನ ಶೈಕ್ಷಣಿಕ ಮಂಡಳಿಯ ದ್ವಿತೀಯ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸ್ನಾತಕೋತ್ತರ ಪದವಿಯಲ್ಲಿ ಆಯ್ಕೆ ಆಧಾರಿತ ಶ್ರೇಯಾಂಕ ಪದ್ಧತಿ 2016-17ರ ಸಾಲಿನಲ್ಲಿ ಜಾರಿಗೆ ತರಲಾಗಿದೆ. ನೂತನ ಪರಿನಿಯಮಕ್ಕೆ ಪ್ರೊ.ಜೆ. ಈಶ್ವರ ಭಟ್ ಅಧ್ಯಕ್ಷತೆಯ ಸಮಿತಿಯಲ್ಲಿ ಯುಜಿಸಿ ಮಾರ್ಗಸೂಚಿಗಳ ಪ್ರಕಾರ ವಿನಿಮಯ ತಯಾರಿಸಿದ್ದು ಸೆ.15ರಂದು ಕಾರ್ಯಗಾರ ನಡೆಸಿ ಎಲ್ಲ ಕಾಲೇಜುಗಳ ಪ್ರಾಂಶುಪಾಲರಿಗೆ ಹಾಗೂ ಪದವಿ ಮಟ್ಟದ ಅಧ್ಯಯನ ಮಂಡಳಿಗಳ ಅಧ್ಯಕ್ಷರಿಗೆ ಮಾಹಿತಿ ನೀಡಲಾಗಿದೆ ಎಂದು ನುಡಿದರು.

ಯುಜಿಸಿಯು 2015ರಲ್ಲಿ ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಆಯ್ಕೆ ಆಧಾರಿತ ಶ್ರೇಯಾಂಕ ಪದ್ಧತಿಯನ್ನು ಜಾರಿಗೆ ತರಲು ಸೂಚಿಸಿದೆ. ಅದರಂತೆ ಪದವಿಮಟ್ಟದ ಕಾರ್ಯಕ್ರಮಗಳಿಗೆ ಆಯ್ಕೆ ಆಧಾರಿತ ಶ್ರೇಯಾಂಕ ಪದ್ಧತಿಗಾಗಿ ಕಾರ್ಯಾಗಾರದ ಅಭಿಪ್ರಾಯಗಳನ್ನು ಕ್ರೋಡೀಕರಿಸಿದೆ. ವಿಜ್ಞಾನ ನಿಕಾಯದ ವ್ಯಾಪ್ತಿಯಲ್ಲಿ ಬರುವ ಪದವಿಗಳಿಗೆ ಪದವಿಪೂರ್ವ ತರಗತಿಗಳಲ್ಲಿ ವಿಜ್ಞಾನ ವಿಷಯಗಳನ್ನು ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾತಿ ನಿಗದಿ ಪಡಿಸಲಾಗಿದೆ ಎಂದು ನುಡಿದರು.

ಯುಜಿಸಿ ನಿಯಮದಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ವಿಷಯ ವಾಣಿಜ್ಯ ವಿಭಾಗದಡಿ ಬರುವುದರಿಂದ ಈಗಿರುವ ಬಿಎ(ಎಚ್‌ಆರ್‌ಡಿ)ಶೀರ್ಷಿಕೆಯನ್ನು ಬಿಕಾಂ(ಎಚ್‌ಆರ್‌ಡಿ) ಎಂದು ಬದಲಿಸುವ ಅಗತ್ಯವಿದೆ. ಮಂಗಳೂರು ವಿವಿಯಲ್ಲಿ ಬಿ.ಎ.(ಎಚ್‌ಆರ್‌ಡಿ) ಮಾಡಿದ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗೆ ಬಂದಾಗ ಎಂಕಾಂ(ಎಚ್‌ಆರ್‌ಡಿ) ಸೀಟು ಬೇಕು ಎಂದು ಕೇಳುತ್ತಾರೆ. ವಾಸ್ತವದಲ್ಲಿ ಬಿಎ ಪದವಿಯಲ್ಲಿ ವಾಣಿಜ್ಯ ವಿಭಾಗಕ್ಕೆ ಸಂಬಂಧಪಟ್ಟ ವಿಷಯಗಳನ್ನು ಕಲಿಯದೆ ಎಂಕಾಂ/ಬಿ.ಎ(ಎಚ್‌ಆರ್‌ಡಿ)ಗೆ ಬಂದಾಗ ತೊಂದರೆಯಾಗಲಿದೆ. ಹಾಗೆಯೇ ಮಂಗಳೂರು ವಿವಿಯಲ್ಲಿ ಬಿಎ(ಎಚ್‌ಆರ್‌ಡಿ) ಅಧ್ಯಯನ ಮಾಡಿದರಾದರೂ ಎಂಎ(ಎಚ್‌ಆರ್‌ಡಿ)ಕಲಿಯಲು ಅವಕಾಶ ಇಲ್ಲ. ಹಾಗಾಗಿ ಯಜಿಸಿ ನಿಯಮದಂತೆ ಮುಂದುವರಿಯಲು ಶಿರೋನಾಮೆ ಬದಲಾವಣೆ ಕಾರ್ಯ ಮುಂದಿನ ಶೈಕ್ಷಣಿಕ ಸಾಲಿನಲ್ಲಿಅನುಷ್ಠಾನಕ್ಕೆ ಬರಲಿದೆ ಎಂದರು.

2019-20ರ ಸಾಲಿನಿಂದ ಪದವಿ ಮಟ್ಟದಲ್ಲಿ ಬಿ.ಎಡ್, ಬಿ.ಎ.ಎಸ್.ಎಲ್.ಪಿ.ಬಿ.ಎಚ್.ಎಂ, ಹೊರತುಪಡಿಸಿ ಇತರ ಎಲ್ಲ ಕಾರ್ಯಕ್ರಮಗಳಿಗೆ ಆಯ್ಕೆ ಆಧಾರಿತ ಶ್ರೇಯಾಂಕ ಪದ್ಧತಿ ಜಾರಿಗೆ ತರಲು ಹಾಗೂ ಹೆಚ್ಚುವರಿ ಬೋಧನಾವಧಿಯನ್ನು ಅಧ್ಯಾಪಕರ ಕಾರ್ಯಭಾರದೊಂದಿಗೆ ಸೇರಿಸಲು ಅನುಮೋದಿಸಲಾಯಿತು.

*ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿಗೆ 2007-08ರ ಶೈಕ್ಷಣಿಕ ಸಾಲಿನಲ್ಲಿ ನೀಡಲಾದ ಸ್ವಾಯತ್ತ ಸ್ಥಾನಮಾನ ಮುಂದುವರಿಕೆ
*ಮಂಗಳೂರಿನ ಸಂತ ಆಗ್ನೆಸ್ ಕಾಲೇಜಿಗೆ 2007-08ರ ಶೈಕ್ಷಣಿಕ ಸಾಲಿನಲ್ಲಿ ನೀಡಲಾದ ಸ್ವಾಯತ್ತ ಸ್ಥಾನಮಾನ ಮುಂದುವರಿಕೆ
*ಮಂಗಳೂರಿನ ಸಂತ ಆವ್ಯನ್ಸ್ ಕಾಲೇಜ್ ಆಫ್ ಎಜುಕೇಶನ್‌ಗೆ 2007-08ರ ಶೈಕ್ಷಣಿಕ ಸಾಲಿನಲ್ಲಿ ನೀಡಲಾದ ಸ್ವಾಯತ್ತ ಸ್ಥಾನಮಾನ ಮುಂದುವರಿಕೆ
*ಉಡುಪಿ ಅಜ್ಜರಕಾಡಿನ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ 2019-20ರ ಸಾಲಿನಲ್ಲಿ ಎಂಎಸ್ಸಿ ರಸಾಯನ ಶಾಸ್ತ್ರ ಕೋರ್ಸ್ ಸಂಯೋಜನೆಗೆ ಅನುಮೋದನೆ
*ಮಂಗಳೂರಿನ ಸಂತ ಆಗ್ನೆಸ್ ಕಾಲೇಜಿಗೆ 2018-19ರ ಸಾಲಿನಿಂದ ಎಂಎಸ್ಸಿ ಸೈಕಾಲಜಿ ಕೋರ್ಸಿಗೆ ಹೆಚ್ಚುವರಿ ವಿದ್ಯಾರ್ಥಿ ಪರಿಮಿತಿಗೆ ಮಂಜೂರು
ಮಂಗಳೂರು ವಿವಿಯಲ್ಲಿ ನೆಹರೂ ಚಿಂತನಾ ಕೇಂದ್ರದ ಸ್ಥಾಪನೆಗೆ ಸಂಬಂಧಿಸಿದ ಪರಿನಿಯಮವನ್ನು ಕೆಲವೊಂದು ಬದಲಾವಣೆಗಳೊಂದಿಗೆ ಅನುಮೋದಿಸಲಾಯಿತು.

ಮಂಗಳೂರು ವಿವಿಯ ಅಂಚೆ ತೆರಪಿನ ಶಿಕ್ಷಣ ನಿರ್ದೇಶನಾಲಯದಲ್ಲಿ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಹುದ್ದೆಗಳ ಸೃಜನೆಗೆ ಸಂಬಂಧಿಸಿ ಪರಿನಿಯಮ ತಿದ್ದುಪಡಿ ಹಾಗೂ ಅಂಚೆ ತೆರಪಿನ ಶಿಕ್ಷಣ ನಿರ್ದೇಶನಾಲಯದ ಹೆಸರನ್ನು ದೂರ ಶಿಕ್ಷಣ ಕೇಂದ್ರ ಎಂದು ಶೀರ್ಷಿಕೆ ಬದಲಾಯಿಸಲು ಅನುಮೋದನೆ ನೀಡಲಾಯಿತು.

ವಿವಿಯ ಪ್ರಭಾರ ಕುಲಪತಿ ಡಾ. ಕಿಶೋರ್‌ಕುಮಾರ್ ಸಿ.ಕೆ. ಅಧ್ಯಕ್ಷತೆ ವಹಿಸಿದ್ದರು. ಪರೀಕ್ಷಾಂಗ ಕುಲಸಚಿವ ರವೀಂದ್ರಾಚಾರಿ ಹಾಗೂ ಹಣಕಾಸು ಅಧಿಕಾರಿ ದಯಾನಂದ ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News