ವಿವಿಐಪಿಗಳ ಪ್ರಯಾಣ: ಏರ್ ಇಂಡಿಯಾಗೆ 1146 ಕೋಟಿ ರೂ. ಬಾಕಿಯುಳಿಸಿದ ಸರಕಾರ

Update: 2018-09-30 13:24 GMT

ಹೊಸದಿಲ್ಲಿ,ಸೆ.30: ತೀವ್ರ ಹಣಕಾಸಿನ ಬಿಕ್ಕಟ್ಟು ಎದುರಿಸುತ್ತಿರುವ ಏರ್ ಇಂಡಿಯಾಗೆ ವಿವಿಐಪಿಗಳ ಪ್ರಯಾಣಕ್ಕಾಗಿ ಪಡೆದುಕೊಂಡಿದ್ದ ವಿಮಾನಗಳ ಬಾಬ್ತು 1146.86 ಕೋ.ರೂ. ಗಳನ್ನು ಸರಕಾರವು ಒಟ್ಟು ಬಾಕಿಯನ್ನುಳಿಸಿಕೊಂಡಿದೆ. ಈ ಬಗ್ಗೆ ವಿವರ ಕೋರಿ ನಿವೃತ್ತ ಕಮೊಡೋರ್ ಲೋಕೇಶ ಬಾತ್ರಾ ಅವರು ಆರ್‌ಟಿಐ ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಏರ್‌ಇಂಡಿಯಾ ಸೆ.26ರಂದು ನೀಡಿರುವ ಉತ್ತರದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.

 ರಕ್ಷಣಾ ಸಚಿವಾಲಯ 211.17 ಕೋ.ರೂ.,ಸಂಪುಟ ಸಚಿವಾಲಯ ಮತ್ತು ಪ್ರಧಾನಿ ಕಚೇರಿ 543.18 ಕೋ.ರೂ.ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯ 392.33 ಕೋ.ರೂ.ಗಳ ಬಿಲ್‌ಗಳನ್ನು ಬಾಕಿಯುಳಿಸಿವೆ. ಈ ಪೈಕಿ ಕೆಲವು ಬಿಲ್‌ಗಳು 10 ವರ್ಷಗಳಷ್ಟು ಹಳೆಯದಾಗಿವೆ.

ಈ ವರ್ಷದ ಮಾರ್ಚ್‌ನಲ್ಲಿ ನೀಡಿದ್ದ ಹಿಂದಿನ ಉತ್ತರದಂತೆ ಜ.31ಕ್ಕೆ ಇದ್ದಂತೆ ಸರಕಾರದಿಂದ ಏರ್ ಇಂಡಿಯಾಕ್ಕೆ ಬರಬೇಕಾಗಿದ್ದ ಬಾಕಿಯ ಮೊತ್ತ 325 ಕೋ.ರೂ.ಗಳಾಗಿದ್ದು,ಈಗ ಇದು 1146.86 ಕೋ.ರೂ.ಗೇರಿದೆ.

ವಿವಿಐಪಿಗಳಾದ ರಾಷ್ಟ್ರಪತಿ,ಉಪರಾಷ್ಟ್ರಪತಿ ಮತ್ತು ಪ್ರಧಾನಿಯವರ ವಿದೇಶ ಪ್ರವಾಸಗಳಿಗಾಗಿ ಏರ್ ಇಂಡಿಯಾ ಬಾಡಿಗೆಯ ನೆಲೆಯಲ್ಲಿ ತನ್ನ ವಿಮಾನಗಳನ್ನು ಒದಗಿಸುತ್ತದೆ. ಪ್ರಯಾಣಿಸುವ ಗಣ್ಯರ ಅಗತ್ಯಗಳಿಗನುಗುಣವಾಗಿ ಅದು ತನ್ನ ವಾಣಿಜ್ಯ ವಿಮಾನಗಳಲ್ಲಿ ಬದಲಾವಣೆಗಳನ್ನು ಮಾಡುತ್ತದೆ. ಇವುಗಳಿಗಾಗಿ ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಗಳು,ಪ್ರಧಾನಿ ಕಚೇರಿ ಮತ್ತು ಸಂಪುಟ ಸಚಿವಾಲಯ ತಮ್ಮ ಖಜಾನೆಯಿಂದ ಶುಲ್ಕಗಳನ್ನು ಪಾವತಿಸುತ್ತವೆ.

ಸಿಎಜಿ ತನ್ನ 2016ರ ವರದಿಯಲ್ಲಿ ಸರಕಾರದಿಂದ ಏರ್ ಇಂಡಿಯಾಕ್ಕೆ ಬಾಡಿಗೆ ಮೊತ್ತ ಬಾಕಿಯಿರುವುದನ್ನು ಬೆಟ್ಟು ಮಾಡಿದ್ದರು. ಏರ್ ಇಂಡಿಯಾಕ್ಕೆ ಕೆಲವು ಬಿಲ್‌ಗಳು 2006ರಿಂದಲೂ ಬಾಕಿಯಿವೆ. ಸಿಎಜಿಯ ಸೂಚನೆಯ ಹೊರತಾಗಿಯೂ ಸರಕಾರವು ಬಿಲ್‌ಗಳನ್ನು ಪಾವತಿಸಿಲ್ಲ ಎಂದು ಬಾತ್ರಾ ತಿಳಿಸಿದರು.

ಏರ್ ಇಂಡಿಯಾ 50,000 ಕೋ.ರೂ.ಗೂ ಹೆಚ್ಚಿನ ಸಾಲದ ಸುಳಿಯಲ್ಲಿ ಸಿಲುಕಿ ತತ್ತರಿಸುತ್ತಿದೆ. 2012ರಲ್ಲಿ ಆಗಿನ ಯುಪಿಎ ಸರಕಾರವು ಒದಗಿಸಿದ್ದ ಹಣಕಾಸು ಪ್ಯಾಕೇಜ್‌ನಿಂದಾಗಿ ಅದು ಈಗಲೂ ಉಸಿರಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News