ನೌಕಾಪಡೆಯಲ್ಲಿ ಸಿಡಿಗುಂಡು ನಿವಾರಕ ನೌಕೆಗಳ ಕೊರತೆ
ಕೋಲ್ಕತಾ, ಸೆ.30: ನೌಕಾಪಡೆಯು ಸಿಡಿಗುಂಡುಗಳನ್ನು ಪತ್ತೆಹಚ್ಚಿ ಅವನ್ನು ನಿಷ್ಕ್ರಿಯಗೊಳಿಸುವ ನೌಕೆಗಳ ತೀವ್ರ ಕೊರತೆಯನ್ನು ಎದುರಿಸುತ್ತಿದೆ. ಇಂತಹ 12 ನೌಕೆಗಳ ಅಗತ್ಯವಿದ್ದು, ಈಗ ಕೇವಲ 2 ನೌಕೆಗಳು ಮಾತ್ರ ಇವೆ ಎಂದು ನೌಕಾಪಡೆಯ ಉನ್ನತ ಅಧಿಕಾರಿ ತಿಳಿಸಿದ್ದಾರೆ. ಸಣ್ಣ ಯುದ್ಧನೌಕೆಗಳಾದ ಸಿಡಿಗುಂಡು ನಿವಾರಕ ನೌಕೆಗಳು ನೀರಿನಡಿ ಇರಿಸಿರುವ ಸಿಡಿಗುಂಡುಗಳನ್ನು ಪತ್ತೆಹಚ್ಚಿ ಅವನ್ನು ನಿಷ್ಕ್ರಿಯಗೊಳಿಸುತ್ತವೆ.
ಸಮುದ್ರದ ಮೂಲಕ ಅಗತ್ಯವಿರುವ ಸರಕು ಸಾಗಾಟ ಪ್ರಕ್ರಿಯೆಯ ಸುರಕ್ಷತೆಗೆ ಇಂತಹ ನೌಕೆಗಳ ಅಗತ್ಯವಿದೆ. ಇದೀಗ ನೌಕಾಪಡೆ ಸಿಡಿಗುಂಡು ನಿವಾರಕ ನೌಕೆಗಳ ತೀವ್ರ ಕೊರತೆಯನ್ನು ಎದುರಿಸುತ್ತಿದೆ ಎಂದು ಶುಕ್ರವಾರ ನೌಕಾಪಡೆಯ ಇಂಧನ ದೋಣಿಯನ್ನು ಉದ್ಘಾಟಿಸುವ ಕಾರ್ಯಕ್ರಮದ ನೇಪಥ್ಯದಲ್ಲಿ ನೌಕಾಪಡೆಯ ರಿಯರ್ ಅಡ್ಮಿರಲ್ ರಾಜಾರಾಮ್ ಸ್ವಾಮಿನಾಥನ್ ಹೇಳಿದರು. ಇದೀಗ ಗೋವಾ ಶಿಪ್‌ಯಾರ್ಡ್‌ನ ರಕ್ಷಣಾ ಉಪಕರಣ ನಿರ್ಮಾಣ ವಿಭಾಗವು ಇಂತಹ ನೌಕೆಗಳನ್ನು ನಿರ್ಮಿಸಲು ವಿದೇಶಿ ಸಂಸ್ಥೆಯ ಸಹಭಾಗಿತ್ವವನ್ನು ಎದುರುನೋಡುತ್ತಿದೆ. 32,000 ಕೋಟಿ ರೂ. ಮೊತ್ತದ ಈ ಯೋಜನೆಗಾಗಿ ಸರಕಾರ ವಿದೇಶಿ ಸಂಸ್ಥೆಯೊಂದನ್ನು ನೇಮಿಸುವ ಪ್ರಕ್ರಿಯೆ ನಡೆಸುತ್ತಿದೆ ಎಂದವರು ತಿಳಿಸಿದ್ದಾರೆ. ದೇಶದ ಪಶ್ಚಿಮ ಮತ್ತು ಪೂರ್ವ ಕರಾವಳಿ ತೀರದಲ್ಲಿ ಕನಿಷ್ಟ 12 ಪ್ರಮುಖ ಬಂದರುಗಳು ಹಾಗೂ ಹಲವು ಸಣ್ಣಪುಟ್ಟ ಬಂದರುಗಳಿದ್ದು ಇವುಗಳ ಸುರಕ್ಷತೆಗೆ ಸಿಡಿಗುಂಡು ನಿವಾರಕ ನೌಕೆಗಳ ಅಗತ್ಯವಿದೆ.