×
Ad

ಇಂಡೋನೇಷ್ಯಾ ಸುನಾಮಿ: ಸ್ಮಶಾನದಂತಾದ ಪಲು ನಗರ

Update: 2018-09-30 20:30 IST

 ಪಲು, ಸೆ.30: ಇಂಡೊನೇಶ್ಯದ ಸುಲಾವೆಸಿ ದ್ವೀಪದ ಪಲು ನಗರದಲ್ಲಿ ಕಳೆದ ಶುಕ್ರವಾರ ಸಂಭವಿಸಿದ ಭೀಕರ ಭೂಕಂಪ ಹಾಗೂ ದೈತ್ಯ ಸುನಾಮಿ ಅಲೆಗಳ ಹೊಡೆತಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ ರವಿವಾರ 832ಕ್ಕೇರಿದೆ.

 ಸುನಾಮಿಯಿಂದ ಜರ್ಝರಿತವಾದ ಸುಲಾವೆಸಿ ದ್ವೀಪದಲ್ಲಿ ಜನರು ಆಹಾರ ಹಾಗೂ ನೀರಿಗಾಗಿ ಪರದಾಡುತ್ತಿದ್ದರೆ, ವಸ್ತುಶಃ ಸ್ಮಶಾನದಂತಾಗಿರುವ ಈ ದ್ವೀಪದಲ್ಲಿ ದುಷ್ಕರ್ಮಿಗಳು ಕಳ್ಳತನ, ಲೂಟಿ ಕೃತ್ಯಗಳಲ್ಲಿ ತೊಡಗಿದ್ದಾರೆ.

ರಾಷ್ಟ್ರೀಯ ವಿಕೋಪ ಪರಿಹಾರ ಏಜೆನ್ಸಿಯು ಪ್ರಕಟಿಸಿರುವ ಭೂಕಂಪ, ಸುನಾಮಿಯಿಂದ ಮೃತಪಟ್ಟವರ ಸಂಖ್ಯೆಯು, ಅದು ಇದಕ್ಕೂ ಮುನ್ನ ಪ್ರಕಟಿಸಿದ್ದ ಸಾವುನೋವಿನ ಸಂಖ್ಯೆಗಿಂತ ಎರಡು ಪಟ್ಟು ಹೆಚ್ಚಾಗಿದೆ. ಸಾವಿನ ಸಂಖ್ಯೆ ಕೆಲವು ಸಾವಿರವನ್ನು ದಾಟುವ ಸಾಧ್ಯತೆಯಿದೆಯೆಂದು ಇಂಡೋನೇಶ್ಯದ ಉಪಾಧ್ಯಕ್ಷ ಜುಸುಫ್ ಕಲ್ಲಾ ತಿಳಿಸಿದ್ದಾರೆ.

ಭೂಕಂಪ, ಸುನಾಮಿಯಿಂದ ತತ್ತರಿಸಿರುವ ಪಲು ನಗರದ ಕರಾವಳಿ ಪ್ರದೇಶವಾದ ಡೊಂಗಾಲಾದಲ್ಲಿ ಆ್ಯಂಬುಲೆನ್ಸ್‌ಗಳು ಶವಗಳನ್ನು ಒಯ್ಯುತ್ತಿರುವ ದೃಶ್ಯ ಎಲ್ಲೆಡೆ ಕಾಣಿಸುತ್ತಿದೆ. ಶುದ್ಧ ನೀರಿನ ಅಭಾವ ಕೂಡಾ ಉಂಟಾಗಿದ್ದು, ನಗರದ ಸಣ್ಣಪುಟ್ಟ ಮಾರುಕಟ್ಟೆಗಳನ್ನು ದರೋಡೆಕೋರರು ಕೊಳ್ಳೆಹೊಡೆಯುತ್ತಿದ್ದಾರೆ. ಎಂದು ಇಂಡೊನೇಶ್ಯದ ಮೆಟ್ರೋ ಟಿವಿ ರವಿವಾರ ವರದಿ ಮಾಡಿದೆ. ಡೊಂಗಾಲಾ ಪ್ರದೇಶವು ಭೂಕಂಪದ ಕೇಂದ್ರಬಿಂದುವಿಗೆ ತೀರಾ ಸಮೀಪದಲ್ಲಿದೆ. ಭೂಕಂಪದ ಬಳಿಕ ಈ ಪ್ರದೇಶದಲ್ಲಿನ ಹಲವಾರು ನಿವಾಸಿಗಳು ಸುನಾಮಿ ಭೀತಿಯಿಂದ ಎತ್ತರದ ಪ್ರದೇಶಗಳಿಗೆ ಪಲಾಯನಗೈದಿದ್ದರು. ಶುಕ್ರವಾರ ರಿಕ್ಟರ್‌ಮಾಪಕದಲ್ಲಿ 7.5 ತೀವ್ರತೆಯನ್ನು ದಾಖಲಿಸಿರುವ ಭೂಕಂಪ ಸಂಭವಿಸಿದ ಬಳಿಕ ದೈತ್ಯ ಸುನಾಮಿ ಅಲೆಗಳಿಂದ ತತ್ತರಿಸಿದ ಶುಕ್ರವಾರ ಪಲುನಗರದಲ್ಲಿ ಬೀಚ್ ಉತ್ಸವಕ್ಕಾಗಿ ಕಡಲಕಿನಾರೆಯಲ್ಲಿ ಜಮಾಯಿಸಿದ್ದ ನೂರಾರು ಮಂದಿ ನಾಪತ್ತೆಯಾಗಿದ್ದು, ಅವರ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲವೆಂದು ತಿಳಿದುಬಂದಿದೆ.

 ಹಲವೆಡೆ ನೂರಾರು ಮರಗಳು ಧರಾಶಾಯಿಯಾಗಿದ್ದು,ಹಲವಾರು ಕಾರುಗಳು ತಲೆಕೆಳಗಾಗಿ ಬಿದ್ದಿರುವ ದೃಶ್ಯಗಳು ಎಲ್ಲೆಡೆ ಕಾಣುತ್ತಿವೆ. ಪ್ರಕೃತಿ ವಿಕೋಪದಿಂದ ಜರ್ಝರಿತವಾದ ಸುಲಾವೆಸಿ ದ್ವೀಪ ಪ್ರಾಂತಕ್ಕೆ ಇಂಡೊನೇಶ್ಯ ಅಧ್ಯಕ್ಷ ಜೊಕೊ ವಿಡೊಡೊ ರವಿವಾರ ಭೇಟಿ ನೀಡಿದ್ದಾರೆ. ಭೂಕಂಪ ಮತ್ತೆ ಸಂಭವಿಸುವ ಭೀತಿಯಿಂದ ಸಂತ್ರಸ್ತರು ತಾತ್ಕಾಲಿಕವಾಗಿ ಬಿದಿರಿನಿಂದ ನಿರ್ಮಿಸಿದ ಜೋಪಡಿಗಳಲ್ಲಿ ಅಥವಾ ಬಯಲುಗದ್ದೆಗಳಲ್ಲಿ ನಿದ್ರಿಸಿದ್ದಾರೆಂದು ತಿಳಿದುಬಂದಿದೆ.

 ಈ ಮಧ್ಯೆ ಆಹಾರ ಮತ್ತಿತರ ಪರಿಹಾರ ಸಾಮಗ್ರಿಗಳನ್ನು ಒಯ್ದು ತಂದಿರುವ ಇಂಡೊನೇಶ್ಯ ಸೇನೆಯ ಸಿ-130 ವಿಮಾನವು ಪಲು ನಗರದಲ್ಲಿ ಮುಖ್ಯ ವಿಮಾನನಿಲ್ದಾಣದಲ್ಲಿ ಬಂದಿಳಿದಿದೆ. ಆಸ್ಪತ್ರೆಗಳಿಗೆ ಗಾಯಾಳುಗಳ ಮಹಾಪೂರವೇ ಹರಿದುಬರುತ್ತಿದ್ದು, ಅನೇಕರಿಗೆ ತೆರೆದ ಬಯಲಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅನೇಕ ಕಡೆ ವಿದ್ಯುತ್ ಸಂಪರ್ಕ ಕಡಿದುಹೋಗಿದ್ದು, ರಾತ್ರಿಯಿಡೀ ಗಾಢಾಂಧಕಾರ ಕವಿದಿತ್ತು ಎಂದವರು ಹೇಳಿದ್ದಾರೆ. ಭೂಕಂಪಗ್ರಸ್ತ ಪಲು ನಗರದಿಂದ ಈಗಾಗಲೇ 17 ಸಾವಿರ ಮಂದಿಯನ್ನು ತೆರವುಗೊಳಿಸಲಾಗಿದೆ ಎಂದು ವಿಕೋಪ ಪರಿಹಾರ ಸಂಸ್ಥೆ ತಿಎಳಿಸಿದೆ.

ಪೆಸಿಫಿಕ್ ಸಾಗರದ ದ್ವೀಪರಾಷ್ಟ್ರವಾದ ಇಂಡೊನೇಶ್ಯವು, ಭೂಪದರದಲ್ಲಿರುವ ಟೆಕ್ನೊನಿಕ್ ತಟ್ಟೆಗಳು ಘರ್ಷಿಸುವಂತಹ ಸ್ಥಳದಲ್ಲಿರುವುದರಿಂದ (ರಿಂಗ್ಸ್ ಆಫ್ ಫೈರ್) ಆಗಾಗ್ಗೆ ಭೂಕಂಪಕ್ಕೆ ತುತ್ತಾಗುತ್ತಿದೆ.

ಈ ವರ್ಷದ ಆರಂಭದಲ್ಲಿ ಇಂಡೊನೇಶ್ಯದ ಪ್ರವಾಸಿ ದ್ವೀಪವಾದ ಸುಂಬಾವಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, 550ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡಿತ್ತು.

2004ರ ಡಿಸೆಂಬರ್‌ನಲ್ಲಿ ಸುಮಾತ್ರದ ಕರಾವಳಿಯಲ್ಲಿ ಭೀಕರ ಭೂಕಂಪ ಸಂಭವಿಸಿದ ಬಳಿಕ ಅಪ್ಪಳಿಸಿದ ಸುನಾಮಿ ಅಲೆಗಳ ಹೊಡೆತಕ್ಕೆ ಸಿಲುಕಿ 1.68 ಲಕ್ಷ ಮಂದಿ ಸಾವನ್ನಪ್ಪಿದ್ದರು.

ಕಟ್ಟಡಗಳ ಅವಶೇಷಗಳ ನಡುವೆ ಸಿಕ್ಕಿಹಾಕಿಕೊಂಡ 150 ಮಂದಿ

 ಪಲು ನಗರದಾದ್ಯಂತ ಇಂಡೊನೇಶ್ಯದ ಮಿಲಿಟರಿ ಪಡೆಗಳನ್ನು ನಿಯೋಜಿಸ ಲಾಗಿದ್ದು, ಕುಸಿದುಬಿದ್ದ ಮನೆಗಳು ಹಾಗೂ ಕಟ್ಟಡಗಳ ಭಗ್ನಾವಶೇಷಗಳೆಡೆಯಲ್ಲಿ ಸಿಕ್ಕಿಹಾಕಿಕೊಂಡವರನ್ನು ಶೋಧ ಹಾಗೂ ರಕ್ಷಣಾ ತಂಡಗಳು ಹೊರತರುವ ಕಾರ್ಯಾಚರಣೆಯಲ್ಲಿ ತೊಡಗಿವೆ. ಕುಸಿದುಬಿದ್ದಿರುವ ಪ್ರತಿಷ್ಠಿತ ಹೊಟೇಲೊಂದರ ಅವಶೇಷಗಳ ನಡುವೆ ಸುಮಾರು 150 ಮಂದಿ ಸಿಲುಕಿದ್ದು ಅವರನ್ನು ರಕ್ಷಿಸುವ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.ಆಹಾರ, ನೀರಿಲ್ಲದೆ ಸಂತ್ರಸ್ತರ ಅಕ್ರಂದನ ಮುಗಿಲುಮುಟ್ಟಿದೆ.

‘‘ರೊವಾ ರೊವಾ ಹೊಟೇಲ್‌ನಿಂದ ನಿನ್ನೆ ರಾತ್ರಿ ಓರ್ವ ಮಹಿಳೆಯನ್ನು ಜೀವಂತ ವಾಗಿ ಹೊರಗೆಳೆದಿರುವುದಾಗಿ ರಾಷ್ಟ್ರೀಯ ಶೋಧ ಹಾಗೂ ರಕ್ಷಣಾ ಏಜೆನ್ಸಿಯ ವರಿಷ್ಠ ಮುಹಮ್ಮದ್ ಸ್ಯಾಯುಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News