×
Ad

ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಶನ್: ಕುಡುಪು ಗ್ರಾಮದಲ್ಲಿ ಮನೆ ನಿರ್ಮಾಣಕ್ಕೆ ಚಾಲನೆ

Update: 2018-09-30 20:39 IST

ಮಂಗಳೂರು, ಸೆ.30: ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಶನ್ ವತಿಯಿಂದ ನಗರದ ಹೊರವಲಯದ ಕುಡುಪು ಗ್ರಾಮದ ನಡುಮನೆ ಫ್ರಾದ್‌ಸಾಯ್ಬಾ ಕಾಲನಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಅರ್ಹ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುವ ಯೋಜನೆಗೆ ರವಿವಾರ ಬಿಕರ್ನಕಟ್ಟೆ ಬಾಲ ಯೇಸು ಪುಣ್ಯ ಕ್ಷೇತ್ರದ ಧರ್ಮಗುರು ಫಾ. ಪ್ರಕಾಶ್ ಡಿಕುನ್ಹಾ ಚಾಲನೆ ನೀಡಿದರು.

ಮೇಯರ್ ಭಾಸ್ಕರ್ ಮಾತನಾಡಿ ಈಗಿನ ಕಾಲದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ನೆರವಾಗಲು ಮುಂದೆ ಬರುವವರ ಸಂಖ್ಯೆ ಬಹಳಷ್ಟು ಕಡಿಮೆ. ಆದರೆ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಶನ್ ನಿರಂತರವಾಗಿ ಆರ್ಥಿಕವಾಗಿ ಬಡವರ ಪರ ಕಾಳಜಿ ವಹಿಸಿ ಕೆಲಸ ಮಾಡುತ್ತಿದ್ದು, ಇದೀಗ ಐದು ಮಂದಿಗೆ ಮನೆ ಕಟ್ಟಿಸಿ ಕೊಡಲು ಮುಂದಾಗಿರುವುದು ಶ್ಲಾಘನೀಯ ಎಂದರು.

ಈವರೆಗೆ 9 ಮನೆಗಳ ನಿರ್ಮಾಣವಲ್ಲದೆ ಕ್ಯಾನ್ಸರ್ ಮತ್ತು ಹೃದ್ರೋಗಿಗಳಿಗೆ ಸುಮಾರು 10 ಲಕ್ಷ ರೂ.ಗಳಷ್ಟು ನೆರವು, ಕ್ರಿಸ್ಮಸ್ ಸಂದರ್ಭ ಗುರುಪುರ ಕಿನ್ನಿಕಂಬಳದ ಸ್ನೇಹ ಸದನ ಸಂಸ್ಥೆಗೆ 3 ಲಕ್ಷ ರೂ. ನೆರವು, ಧರ್ಮ ಶಾಸ್ತ ಸಂಸ್ಥೆಗೆ ಗಾಲಿ ಕುರ್ಚಿ ಕೊಡುಗೆ ಇತ್ಯಾದಿ ಸೇವಾ ಕಾರ್ಯಗಳನ್ನು ಮಾಡಿದೆ. ಇದೀಗ ದಾನಿ ಚಾರ್ಲ್ಸ್ ಡಿಮೆಲ್ಲೊ ನೀಡಿರುವ 15 ಸೆಂಟ್ಸ್ ಜಮೀನಿನಲ್ಲಿ 5 ಪ್ರತ್ಯೇಕ ಮನೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಶನ್‌ನ ಅಧ್ಯಕ್ಷ ಆಲ್ಪನ್ ಮಿನೇಜಸ್ ಹೇಳಿದರು.

ಇದೀಗ ಶಿಲಾನ್ಯಾಸ ಮಾಡಿರುವ 5 ಮನೆಗಳ ಪೈಕಿ 2 ಕೆಥೋಲಿಕ್ ಕ್ರೈಸ್ತರಿಗೆ, 2 ಹಿಂದೂಗಳಿಗೆ, 1 ಪ್ರೊಟೆಸ್ಟೆಂಟ್ ಕ್ರೈಸ್ತ ಕುಟುಂಬಕ್ಕೆ ಕಟ್ಟಿಸಿ ಕೊಡಲಾಗುತ್ತದೆ. ಈ ಕುಟುಂಬಗಳು ಈಗ ಬಾಡಿಗೆ ಮನೆಗಳಲ್ಲಿ ವಾಸವಾಗಿವೆ. ತಲಾ 3 ಲಕ್ಷ ರೂ. ವೆಚ್ಚದಲ್ಲಿ ಶೀಟ್ ಛಾವಣಿಯ ಮನೆ ಕಟ್ಟಿಸಿ ಕೊಡಲಾಗುವುದು. ಶೀಟ್ ಬದಲು ಕಾಂಕ್ರೀಟ್ ತಾರಸಿಯ ಛಾವಣಿ ನಿರ್ಮಾಣಕ್ಕೆ ಉದಾರ ದಾನಿಗಳು ನೆರವು ಒದಗಿಸಲು ಮುಂದೆ ಬಂದರೆ ನೆರವು ಸ್ವೀಕರಿಸಲಾಗುವುದು (ನೆರವನ್ನು ಅಸೋಸಿಯೇಶನ್‌ನ ಬ್ಯಾಂಕ್ ಖಾತೆ: ಯೂನಿಯನ್ ಬ್ಯಾಂಕ್, ಪದವು ಶಾಖೆ- ಖಾತೆ ನಂಬರ್: 364402050000021 ಇದಕ್ಕೆ ಸಂದಾಯ ಮಾಡಬಹುದು) ಎಂದು ಅಧ್ಯಕ್ಷ ಆಲ್ಬನ್ ಮಿನೇಜಸ್ ತಿಳಿಸಿದರು.

ಚಾರ್ಲ್ಸ್ ಡಿಮೆಲ್ಲೊ ಕುಡುಪು ಗ್ರಾಮ ನಡುಮನೆ ಪ್ರದೇಶದಲ್ಲಿ ತಾವು ಹೊಂದಿದ್ದ ಮೂರುವರೆ ಎಕರೆ ಭೂಮಿಯನ್ನು ಈ ಹಿಂದೆಯೇ ದಾನವಾಗಿ ನೀಡಿದ್ದು, ಅದಕ್ಕೆ ಫ್ರಾದ್ ಸಾಯ್ಬೆ ಕಾಲನಿ ಎಂದು ಹೆಸರಿಸಲಾಗಿತ್ತು. ಈ ಜಾಗದ ಶಿಖರದಲ್ಲಿರುವ 15 ಸೆಂಟ್ಸ್ ಜಾಗದಲ್ಲಿ ಇದೀಗ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಶನ್ ವತಿಯಿಂದ 5 ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News