ಸಂವಾದಕ್ಕೆ ಸಿಗದ ಪ್ರಧಾನಿ: ನಿರಾಶೆಯಿಂದ ಮರಳಿದ ಸಭಿಕರು
ಮಂಗಳೂರು, ಸೆ.30: ದ.ಕ.ಜಿಲ್ಲಾ ಬಿಜೆಪಿ ವತಿಯಿಂದ ನಗರ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್’ ವೀಕ್ಷಿಸುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸಂವಾದಕ್ಕೆ ಸಿಗದ ಕಾರಣ ಹಲವು ಸಭಿಕರು ನಿರಾಶೆಯಿಂದ ಮರಳಿದ ಘಟನೆ ರವಿವಾರ ನಡೆದಿದೆ.
ದೂರದರ್ಶನ ಮೂಲಕ ಪ್ರಸಾರವಾದ ಪ್ರಧಾನಿ ಅವರ ‘ಮನ್ ಕೀ ಬಾತ್’ ಕಾರ್ಯಕ್ರಮವನ್ನು ಬೃಹತ್ ಪರದೆಯಲ್ಲಿ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿತ್ತು. ಭಾಷಣದ ಬಳಿಕ ದ.ಕ.ಜಿಲ್ಲೆಯ ಜನತೆಯ ಜತೆ ಪ್ರಧಾನಿ ಸಂವಾದ ನಡೆಸುವರು ಎಂದು ತಿಳಿಸಲಾಗಿತ್ತು. ಆದರೆ ತಾಂತ್ರಿಕ ಕಾರಣದಿಂದ ಸಂವಾದ ಸಾಧ್ಯವಾಗಲಿಲ್ಲ. ಇದರಿಂದ ಪ್ರಧಾನಿ ಜತೆ ಮಾತನಾಡಬೇಕು ಎಂದು ಆಗಮಿಸಿದವರು ನಿರಾಸೆಯಿಂದ ಮರಳಿದರು.
ಕಾರ್ಯಕ್ರಮವನ್ನು ಮಂಗಳೂರಿನ ಜನತೆ ವೀಕ್ಷಿಸುತ್ತಿರುವ ದೃಶ್ಯವನ್ನು ದೂರದರ್ಶನದಲ್ಲಿ ಮನ್ ಕೀ ಬಾತ್ ಮರುಪ್ರಸಾರದ ವೇಳೆ ತೋರಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಡಾ. ವೈ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಮಾಜಿ ಶಾಸಕ ಎನ್. ಯೋಗೀಶ್ ಭಟ್, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ದ.ಕ. ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಿಶೋರ್ ರೈ, ಸುದರ್ಶನ ಮೂಡುಬಿದಿರೆ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪೂಜಾ ಪೈ, ಪ್ರಮುಖರಾದ ನಿತಿನ್ ಕುಮಾರ್, ಸಂತೋಷ್ ಕುಮಾರ್ ರೈ ಬೋಳಿಯಾರ್, ಜಗದೀಶ ಅಧಿಕಾರಿ, ಡಾ. ಆಶಾಜ್ಯೋತಿ ರೈ, ಡಾ. ಅಣ್ಣಯ್ಯ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.