ಮಲ್ಯರ ‘ಫೋರ್ಸ್ ಇಂಡಿಯ’ ತಂಡದ ‘ಅನುಚಿತ’ ಮಾರಾಟ: ಭಾರತದ 13 ಬ್ಯಾಂಕ್‌ಗಳಿಗೆ 380 ಕೋಟಿ ರೂ. ನಷ್ಟ

Update: 2018-09-30 15:39 GMT

ಲಂಡನ್, ಸೆ. 30: ಭಾರತೀಯ ಬ್ಯಾಂಕ್‌ಗಳಿಗೆ ವಂಚಿಸಿ ಬ್ರಿಟನ್‌ಗೆ ಪರಾರಿಯಾಗಿರುವ ವಿಜಯ ಮಲ್ಯ ಮಾಲೀಕತ್ವದ ‘ಫೋರ್ಸ್ ಇಂಡಿಯ’ ಫಾರ್ಮುಲಾ ವನ್ ತಂಡದ ‘ಅನುಚಿತ’ ಮಾರಾಟ ಪ್ರಕ್ರಿಯೆಯಲ್ಲಿ, ಭಾರತದ 13 ಬ್ಯಾಂಕ್‌ಗಳ ಒಕ್ಕೂಟವು ಸುಮಾರು 40 ಮಿಲಿಯ ಪೌಂಡ್ (ಸುಮಾರು 380 ಕೋಟಿ ರೂಪಾಯಿ) ಕಳೆದುಕೊಂಡಿದೆ ಎಂದು ರಶ್ಯದ ರಸಗೊಬ್ಬರ ಸಮೂಹ ‘ಉರಲ್ಕಲಿ’ ಹೇಳಿದೆ.

ಫೋರ್ಸ್ ಇಂಡಿಯದ ಎರಡು ಪ್ರಮುಖ ಬಿಡ್ಡುದಾರರಲ್ಲಿ ಉರಲ್ಕಲಿಯೂ ಒಂದಾಗಿದೆ. ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯ ನೇತೃತ್ವದ ಈ 13 ಬ್ಯಾಂಕ್‌ಗಳ ಸಮೂಹಕ್ಕೆ ಮಲ್ಯ 10,000 ಕೋಟಿ ರೂಪಾಯಿಗೂ ಅಧಿಕ ಸಾಲವನ್ನು ಮರುಪಾವತಿಸಬೇಕಾಗಿದೆ.

ನಾವು ಅಧಿಕ ಮೊತ್ತದ ಬಿಡ್ ಸಲ್ಲಿಸಿದ್ದರೂ ನಮ್ಮ ಬಿಡ್ಡನ್ನು ತಿರಸ್ಕರಿಸಲಾಗಿದೆ ಹಾಗೂ ಆ ಮೂಲಕ ತಂಡದ ವ್ಯವಸ್ಥಾಪಕರು ಈ ಬ್ಯಾಂಕ್‌ಗಳಿಗೆ ನಷ್ಟ ಉಂಟುಮಾಡಿದ್ದಾರೆ ಎಂದು ಉರಲ್ಕಲಿ ಆರೋಪಿಸಿದೆ.

‘‘ನಮ್ಮ ಬಿಡ್ಡನ್ನು ಅಂಗೀಕರಿಸಿದ್ದರೆ ಫೋರ್ಸ್ ಇಂಡಿಯದ ಮಾಲೀಕ ಕಂಪೆನಿ ‘ಆರೇಂಜ್ ಇಂಡಿಯ ಹೋಲ್ಡಿಂಗ್ಸ್’ಗೆ ಹೆಚ್ಚುವರಿ ಹಣ ಸಿಗುತ್ತಿತ್ತು. ಈ ಕಂಪೆನಿಯ ಆರ್ಥಿಕ ವ್ಯವಹಾರಗಳನ್ನು ಬ್ರಿಟನ್‌ನ ಹೈಕೋರ್ಟ್ ಸ್ಥಗಿಗೊಳಿಸಿದೆ ಹಾಗೂ ಅದಕ್ಕೆ ಬರುವ ಹಣ 13 ಭಾರತೀಯ ಬ್ಯಾಂಕ್‌ಗಳಿಗೆ ಹೋಗಬೇಕೆಂದು ಹೈಕೋರ್ಟ್ ಹೇಳಿದೆ. ಹಾಗಾಗಿ, ಭಾರತೀಯ ಬ್ಯಾಂಕ್‌ಗಳು ಈ ಹೆಚ್ಚುವರಿ ಹಣವನ್ನು ಕಳೆದುಕೊಂಡಂತಾಗಿದೆ’’ ಎಂದು ರಶ್ಯದ ಕಂಪೆನಿ ಹೇಳಿದೆ.

ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ‘ಪೂರ್ವಾಗ್ರಹ ಮತ್ತು ಅಸಮಾನತೆಯ ವಿಧಾನ’ಗಳನ್ನು ಅನುಸರಿಸಿರುವುದಕ್ಕಾಗಿ ಉರಲ್ಕಲಿ, ಲಂಡನ್ ಹೈಕೋರ್ಟ್‌ನಲ್ಲಿ ಗುರುವಾರ ವ್ಯವಸ್ಥಾಪಕ ಕಂಪೆನಿ ಎಫ್‌ಆರ್‌ಪಿ ಅಡ್ವೈಸರಿ ವಿರುದ್ಧ ಮೊಕದ್ದಮೆ ಹೂಡಿದೆ ಹಾಗೂ ಭಾರೀ ಮೊತ್ತದ ಪರಿಹಾರ ಕೋರಿದೆ.

ಕೆನಡದ ಬಿಲಿಯಾಧೀಶ ಲಾರೆನ್ಸ್ ಸ್ಟ್ರಾಲ್ ನೇತೃತ್ವದ ‘ರೇಸಿಂಗ್ ಪಾಯಿಂಟ್ ಕನ್ಸೋರ್ಟಿಯಮ್’, ಫೋರ್ಸ್ ಇಂಡಿಯ ತಂಡವನ್ನು ಗೆದ್ದಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News