ಮೋದಿಯ ಒಬ್ಬ ಸಹೋದರ ಆಟೊ ಚಾಲಕ, ಮತ್ತೊಬ್ಬರು ಕಿರಾಣಿ ಅಂಗಡಿ ಮಾಲಕ: ಬಿಪ್ಲವ್ ದೇವ್

Update: 2018-10-01 13:25 GMT

ಅಗರ್ತಲ, ಅ.1: ಪ್ರಧಾನಿ ನರೇಂದ್ರ ಮೋದಿಯವರ ಒಬ್ಬ ಸಹೋದರ ಆಟೊ ರಿಕ್ಷಾ ಚಾಲನೆ ಮಾಡುತ್ತಿದ್ದರೆ, ಮತ್ತೊಬ್ಬ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದಾರೆ...

ಈ ವಿಷಯವನ್ನು ಬಹಿರಂಗಪಡಿಸಿದವರು ಬೇರಾರೂ ಅಲ್ಲ; ತ್ರಿಪುರಾ ಮುಖ್ಯಮಂತ್ರಿ ಬಿಪ್ಲವ್ ಕುಮಾರ್ ದೇವ್. "ಒಬ್ಬ ಸಹೋದರ ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ. ಮತ್ತೊಬ್ಬ ಆಟೊ ಓಡಿಸುತ್ತಿದ್ದಾರೆ. ಅವರ ತಾಯಿ 10/ 12 ಅಡಿಯ ಕೊಠಡಿಯಲ್ಲಿ ವಾಸಿಸುತ್ತಾರೆ. ಹೇಳಿ; ಇಡೀ ವಿಶ್ವದಲ್ಲಿ ಇಂಥ ಪ್ರಧಾನಿ ಮತ್ತೊಬ್ಬರಿದ್ದಾರೆಯೇ?" ಎಂದು ಬಿಪ್ಲವ್ ವ್ ಸರ್ಜಿಕಲ್ ದಾಳಿ ದಿನಾಚರಣೆಯಲ್ಲಿ ಮಾತನಾಡುತ್ತಾ ಪ್ರಶ್ನಿಸಿದರು. ಆಡಳಿತಾರೂಢ ಬಿಜೆಪಿ ಹಾಗೂ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳ ವತಿಯಿಂದ ಸರ್ಜಿಕಲ್ ದಾಳಿ ದಿನವನ್ನು ಪರಾಕ್ರಮ ಪರ್ವವಾಗಿ ಆಚರಿಸಲಾಯಿತು.

"ಅವರಿಗೆ ವಯೋವೃದ್ಧ ತಾಯಿ ಇದ್ದಾರೆ. ಆದರೆ ಅವರು ಪ್ರಧಾನಿ ನಿವಾಸದಲ್ಲಿ ವಾಸಿಸುವುದಿಲ್ಲ. ಇದಕ್ಕೂ ಮುನ್ನ ಅವರು 13 ವರ್ಷ ಕಾಲ ಮುಖ್ಯಮಂತ್ರಿಯಾಗಿದ್ದರು. ಅವರಿಗೂ ಸಹೋದರ ಸಹೋದರ ಸಹೋದರಿಯರಿದ್ದಾರೆ" ಎಂದು ಬಿಪ್ಲವ್ ಹೇಳಿದರು.

ವಿವಾದಾತ್ಮಕ ಹೇಳಿಕೆಗಳನ್ನು ನೀಡುವಲ್ಲಿ ನಿಸ್ಸೀಮರಾದ ದೇವ್ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಇದುವರೆಗೆ ಇಂಥ ಹಲವು ಹೇಳಿಕೆಗಳನ್ನು ನೀಡಿದ್ದಾರೆ. ಬಾತುಕೋಳಿಗಳು ನೀರಿನ ಆಮ್ಲಜನಕ ಮಟ್ಟ ಹೆಚ್ಚಿಸುತ್ತವೆ ಎಂದು ಹೇಳುವ ಮೂಲಕ ಅಪಹಾಸ್ಯಕ್ಕೀಡಾಗಿದ್ದರು. ಬಳಿಕ ಪ್ರಾಚೀನ ಭಾರತದಲ್ಲೇ ಇಂಟರ್‍ನೆಟ್ ಬಳಕೆ ಮತ್ತು ಕೃತಕ ಉಪಗ್ರಹಗಳು ಇದ್ದುದಕ್ಕೆ ಮಹಾಭಾರತದಲ್ಲಿ ಉಲ್ಲೇಖವಿದೆ ಎಂದು ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News