ಸೈನಿಕರಿಗೆ ಮೋಸ ಮಾಡಿದ ಕೇಂದ್ರ: ಸೊರಕೆ ಆರೋಪ
ಕಾಪು, ಅ. 1: ಸೇನೆ ಸೈನಿಕರ ಹೆಸರಿನಲ್ಲಿ ಭಾವನಾತ್ಮಕವಾಗಿ ಜನರನ್ನು ಕೆರಳಿಸಿ ರಾಜಕೀಯ ಮಾಡುವ ಬಿಜೆಪಿ ಅದೇ ಸೇನೆಗೆ ಸಂಬಂಧಿಸಿದ ವ್ಯವಹಾರದಲ್ಲಿ ಜನತೆಗೆ ಸೈನಿಕರಿಗೆ ಮೋಸ ಮಾಡಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆರೋಪಿಸಿದರು.
ಅವರು ಸೋಮವಾರ ಕಾಪು ಪೇಟೆಯಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೇಂದ್ರ ಸರಕಾರದ ರಫೇಲ್ ಹಗರಣ, ಬೆಲೆಯೇರಿಕೆ ಮತ್ತು ಆಡಳಿತ ವೈಪಲ್ಯದ ವಿರುದ್ದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನಾ ರ್ಯಾಲಿಯ ನೇತೃತ್ವ ವಹಿಸಿ ಮಾತನಾಡಿದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರಪೇಲ್ ಯುದ್ದವಿಮಾನ ಒಪ್ಪಂದಲ್ಲಿ ನಲವತ್ತೈದು ಸಾವಿರ ಕೋಟಿ ರೂಪಾಯಿ ಹಗರಣ ನಡೆಸಿ ತೆರಗೆದಾರರ ಹಣದಿಂದ ಬಂಡವಾಳ ಶಾಯಿಯೊಬ್ಬನಿಗೆ ಲಾಭ ಮಾಡಿಕೊಟ್ಟಿದೆ. ರಫೆಲ್ ವಿಮಾನ ಖರೀದಿಯಲ್ಲಿ ಹಗರಣವೇ ನಡೆದಿಲ್ಲವಾದರೆ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಲು ಅಡ್ಡಿಯೇನಿದೆ ಎಂದು ಪ್ರಶ್ನಿಸಿದರು.
ಎಐಸಿಸಿ ಸದಸ್ಯ ಅಮೃತ್ ಶೆಣೈ ಮಾತನಾಡಿ, ನರೇಂದ್ರ ಮೋದಿ ಈ ದೇಶಕ್ಕೆ ಎರಡು ವಿಧದಲ್ಲಿ ಹಾನಿ ಮಾಡುತ್ತಿದ್ದಾರೆ.ಒಂದೆಡೆ ದೇಶದಲ್ಲಿನ ವೈವಿಧ್ಯತೆಯಲ್ಲಿದ್ದ ಏಕತೆಯನ್ನು ಹಾಳುಗೆಡವಿ ದೇಶದ ಸೌಹಾರ್ದತೆ ಸಾಮರಸ್ಯಕ್ಕೆ ದಕ್ಕೆ ತರುತ್ತಿದ್ದರೆ ಮತ್ತೊಂದೆಡೆ ತೆರಿಗೆದಾರ ಹಣವನ್ನು ಕೊಳ್ಳೆಹೊಡೆಯುವ ಮೂಲಕ ದೇಶವನ್ನು ಲೂಟಿಗೈಯುತ್ತಿದ್ದಾರೆ.ಬಂಡಾಳ ಶಾಯಿಗಳ ಹಣದಿಂದ 4 ವರ್ಷದಲ್ಲಿ 400 ರ್ಯಾಲಿಗಳನ್ನು ನಡೆಸಿ ಸುಳ್ಳುಗಳನ್ನು ಬಿತ್ತುತ್ತಾ ಜನರನ್ನು ದಾರಿತಪ್ಪಿಸಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರ ಬ್ರಿಟಿಷರಿಗಿಂತಲೂ ಮಿಗಿಲಾಗಿ ದೇಶವನ್ನು ಕೊಳ್ಳೆ ಹೊಡೆಯುತ್ತಿದೆ ಎಂದರು.
ಮಾಜಿ ಶಾಸಕ ಗೋಪಾಲ ಭಂಡಾರಿ, ಪಕ್ಷದ ಮುಖಂಡರಾದ ನವೀನ್‍ಚಂದ್ರ ಶೆಟ್ಟಿ, ಮುರಳಿ ಶೆಟ್ಟಿ, ವಿಲ್ಸನ್ ರೋಡ್ರಿಗಸ್, ಶಿವಾಜಿ ಸುವರ್ಣ ಬೆಳ್ಳೆ, ದೀಪಕ್ ಕುಮಾರ್ ಎರ್ಮಳ್, ವಿನಯ ಬಲ್ಲಾಳ್, ಮೆಲ್ವಿನ್ ಪೆರ್ನಾಂಡಿಸ್, ಅಬ್ದುಲ್ ಅಜೀಜ್ ಹೆಜಮಾಡಿ, ರಾಜೇಶ್ ಶೆಟ್ಟಿ, ಗೀತಾ ವಾಗ್ಳೆ, ಪ್ರಭಾವತಿ ಸಾಲ್ಯಾನ್, ಮಾಲಿನಿ, ದಿನೇಶ್ ಕೋಟ್ಯಾನ್, ಗಣೇಶ್ ಕೋಟ್ಯಾನ್, ಸರಸು ಬಂಗೇರ, ಸುಧೀರ್ ಕುಮಾರ್ ,ಪ್ರಖ್ಯಾತ್ ಶೆಟ್ಟಿ, ವೈ. ಸುಕುಮಾರ್, ಶಿವಾಜಿ ಎಸ್. ಸುವರ್ಣ, ಗುಲಾಂ ಮಹಮ್ಮದ್, ಮೆಲ್ವಿನ್ ಡಿ ಸೋಜಾ, ಅಮೀರ್ ಕಾಪು ಮೊದಲಾದವರು ಉಪಸ್ಥಿತರಿದ್ದರು.
ಜಾಥಾ: ಕಾಪು ವಿದ್ಯಾನಿಕೇತನನದಿಂದ ಕಾಪು ಪೇಟೆಯವರೆಗೆ ಬೃಹತ್ ಪ್ರತಿಭಟನಾ ಜಾಥಾ ನಡೆಸಿದರು.ಶಾಸಕ ವಿನಯ ಕುಮಾರ್ ಸೊರಕೆ ಸಹಿತ ಮುಖಂಡರು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾ ಸಭೆಯ ಬಳಿಕ ಕಾಪು ತಾಲೂಕು ಕಛೇರಿಗೆ ತೆರಳಿ ತಹಶೀಲ್ದಾರರಿಗೆ ಮನವಿ ನೀಡಲಾಗಿತು.