ಹರೇಕಳ: ಸಾರಿಗೆ ವ್ಯವಸ್ಥೆಗಾಗಿ ಒತ್ತಾಯಿಸಿ ಡಿವೈಎಫ್‍ಐನಿಂದ ಪ್ರತಿಭಟನೆ
ಕೊಣಾಜೆ, ಅ. 1: ಹರೇಕಳಕ್ಕೆ ಸಮರ್ಪಕ ಸಾರಿಗೆ ವ್ಯವಸ್ಥೆ, ಹರೇಕಳದಿಂದ ಕೊಜಪಾಡಿಗೆ ಬಸ್ ಸೇವೆ ವಿಸ್ತರಿಸುವಂತೆ ಒತ್ತಾಯಿಸಿ ಸೋಮವಾರ ಹರೇಕಳ ಕಡವಿನ ಬಳಿ ಡಿವೈಎಫ್‍ಐ ವತಿಯಿಂದ ನಡೆದ ರಸ್ತೆತಡೆ ಪ್ರತಿಭಟನೆ ನಡೆಯಿತು.
ಡಿವೈಎಫ್‍ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಈ ಸಂದರ್ಭದಲ್ಲಿ ಮಾತನಾಡಿ, ಕಳೆದ ಹತ್ತು ವರ್ಷಗಳ ಹಿಂದೆ ಹರೇಕಳ ಪ್ರದೇಶಕ್ಕೆ ಹತ್ತು ಬಸ್ ಪರವಾನಿಗಳಿದ್ದವು. ಈಗ ಪರವಾನಿಗೆ ಸಂಖ್ಯೆಯೂ ಕಡಿಮೆಯಾಗಿದೆ ಜೊತೆಗೆ ಪರವಾನಿಗೆ ಇದ್ದ ಬಸ್ಸುಗಳು ಕೂಡಾ ಸರಿಯಾಗಿ ಓಡಾಟ ನಡೆಸುತ್ತಿಲ್ಲ. ಇದರಿಂದಾಗಿ ಜನರಿಗೆ ತೊಂದರೆಯಾಗುತ್ತಿದ್ದು, ಸರ್ಕಾರಿ ಬಸ್ ಓಡಾಟಕ್ಕೆ ಅಧಿಕಾರಿಗಳು ಎರಡು ವರ್ಷದ ಹಿಂದೆ ಸರ್ವೆ ನಡೆಸಿದ್ದರೂ ಯೋಜನೆ ಜಾರಿಯಾಗಿಲ್ಲ. ಮೊದಲ ಹಂತದಲ್ಲಿ ಸಾಂಕೇತಿಕ ಬಸ್ ತಡೆ ನಡೆಸಲಾಗಿದೆ, ಮುಂದೆ ವಿವಿಧ ಹಂತದ ಹೋರಾಟ ನಡೆಯಲಿದ್ದು, ಆರ್‍ಟಿಒ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆಯನ್ನೂ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ರಾಜ್ಯದ ಎಲ್ಲಾ ಶಾಸಕರಿಗಿಂತಲೂ ಮಂಗಳೂರು ಕ್ಷೇತ್ರದ ಶಾಸಕ ಯು.ಟಿ.ಖಾದರ್ ಅವರು ಜನರ ಜೊತೆ ಹೆಚ್ಚು ಒಡನಾಟ ಹೊಂದಿರುವ ಹೆಗ್ಗಳಿಕೆ ಹೊಂದಿದ್ದಾರೆ. ಆದರೂ ಹೆಚ್ಚು ಅಲ್ಪಸಂಖ್ಯಾತರು, ಬಡ, ಕೂಲಿ ಕಾರ್ಮಿಕರು ವಾಸವಿರುವ ಹರೇಕಳಕ್ಕೆ ಬಸ್ ವ್ಯವಸ್ಥೆ ಸರಿಪಡಿಸುವ ಮನಸ್ಸು ಮಾಡಬೇಕಾಗಿದೆ. ಇಲ್ಲದಿದ್ದಲ್ಲಿ ನಿಮ್ಮ ಗೆಲುವಿಗಾಗಿ ದುಡಿದ, ಗೆದ್ದಾಗ ಹೆಗಲಲ್ಲಿ ಹೊತ್ತುಕೊಂಡು ಕುಣಿದಾಡಿದ ಜನರೇ ಮುಂದಿನ ಚುನಾವಣೆಯಲ್ಲಿ ಉತ್ತರ ನೀಡುವ ಸಾಮಥ್ರ್ಯ ಹೊಂದಿದ್ದಾರೆ ಎಂದರು.
ಹರೇಕಳ ಗ್ರಾಮ ಪಂಚಾಯಿತಿ ಸದಸ್ಯ ಅಶ್ರಫ್ ಮಾತನಾಡಿ, ಹರೇಕಳಕ್ಕೆ ನಾಲ್ಕು ಖಾಸಗಿ ಬಸ್ಸುಗಳು ಸಂಚರಿಸುತ್ತಿದ್ದು ಎರಡು ಸ್ಟೇಟ್‍ಬ್ಯಾಂಕ್‍ಗೆ ಹೋಗುತ್ತವೆ. ಇವುಗಳ ಪೈಕಿ ಪರವಾನಿಗೆ ಮುಗಿದು ಆರ್‍ಟಿಒ ನಿಯಮಕ್ಕೆ ವಿರುದ್ಧವಾಗಿ ಓಡುವ ಬಸ್ಸುಗಳಿದ್ದು, ಮಳೆಗಾಲದಲ್ಲಿ ಸೋರುವುದರಿಂದ ಪ್ರಯಾಣಿಕರು ಕಷ್ಟಪಡುತ್ತಾರೆ ಎಂದು ತಿಳಿಸಿದರು.
ಡಿವೈಎಫ್‍ಐ ಜಿಲ್ಲಾ ಉಪಾಧ್ಯಕ್ಷ ರಫೀಕ್ ಹರೇಕಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿಪಿಐಎಂ ಹಿರಿಯ ಮುಖಂಡ ಟಿ.ಎಸ್.ಹಮೀದ್ ಮಲಾರ್, ಹರೇಕಳ ಗ್ರಾಮ ಪಂಚಾಯಿತಿ ಸದಸ್ಯ ಹನೀಫ್ ಹರೇಕಳ, ಡಿವೈಎಫ್‍ಐ ಉಳ್ಳಾಲ ವಲಯ ಸಮಿತಿ ಸದಸ್ಯ ಇಸ್ಮಾಯಿಲ್, ಹರೇಕಳ ಘಟಕಾಧ್ಯಕ್ಷ ನಿಝಾಂ, ಮುಖಂಡ ಸಿರಾಜ್ ಇನ್ನಿತರರು ಭಾಗವಹಿಸಿದ್ದರು. ಹರೇಕಳ ಘಟಕ ಕಾರ್ಯದರ್ಶಿ ಸಾದಿಕ್ ವಂದಿಸಿದರು.
ಹಿಂದೆ ಹತ್ತು ಬಸ್ ಪರವಾನಿಗೆ ಇತ್ತಾದರೂ ಈಗ ಆರು ಇದ್ದು ನಾಲ್ಕು ಬಸ್ಸುಗಳು ಸಂಚರಿಸುತ್ತಿದೆ, ಅದೂ ತೀರಾ ಹಳೆಯ ಬಸ್ಸುಗಳಾಗಿದ್ದು, ಆರ್‍ಟಿಒ ನಿಯಮಕ್ಕೆ ವಿರುದ್ಧವಾಗಿ ಸಂಚರಿಸುತ್ತಿರುವುದರಿಂದ ಪ್ರಯಾಣಿಕರಿಗೆ ಭದ್ರತೆ ಇಲ್ಲದಂತಾಗಿ. ಸರ್ಕಾರಿ ಬಸ್ಸಿಗಾಗಿ ಹಲವು ಬಾರಿ ಮನವಿ ನೀಡಲಾಗಿದೆ. ಕೊಜಪಾಡಿ ಪ್ರದೇಶಕ್ಕೆ ಎರಡು ಬಸ್‍ಗಳು ಮಾತ್ರ ಸಂಚರಿಸುತ್ತಿದ್ದು ಅದು ಕೂಡಾ ಟ್ರಿಪ್ ಕಟ್ ಮಾಡಿ ಹೋಗುತ್ತಿವೆ, ಮುಂದಿನ ದಿನಗಳಲ್ಲಿ ಸಂಚಾರ ವ್ಯವಸ್ಥೆಯನ್ನು ಸರಿಪಡಿಸದಿದ್ದಲ್ಲಿ ವಿವಿಧ ಹೋರಾಟಗಳನ್ನು ನಡೆಸಲಾಗುವುದು.
-ರಫೀಕ್ ಹರೇಕಳ, ಡಿವೈಎಫ್‍ಐ ಜಿಲ್ಲಾ ಉಪಾಧ್ಯಕ್ಷ