ಉಗ್ರ ಹಫೀಝ್ ಸಯೀದ್ ಜೊತೆ ಪಾಕ್ ಸಚಿವ: ಭಾರತದ ಆರೋಪಗಳಿಗೆ ಪುರಾವೆ

Update: 2018-10-01 17:42 GMT

ಇಸ್ಲಾಮಾಬಾದ್, ಅ. 1: ಭಯೋತ್ಪಾದನೆಯನ್ನು ಹತ್ತಿಕ್ಕಲು ಏನು ಮಾಡಲು ಸಾಧ್ಯವೋ ಅದೆಲ್ಲವನ್ನೂ ಮಾಡುತ್ತಿರುವುದಾಗಿ ಪಾಕಿಸ್ತಾನ ವಿಶ್ವಸಂಸ್ಥೆಯ ಮಹಾಧಿವೇಶನಕ್ಕೆ ಭರವಸೆ ನೀಡಿದ ಒಂದು ದಿನದ ಬಳಿಕ, ರವಿವಾರ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ರ ಸಚಿವರೊಬ್ಬರು ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರಿ ಹಫೀಝ್ ಸಯೀದ್ ಜೊತೆ ಇಸ್ಲಾಮಾಬಾದ್‌ನಲ್ಲಿ ವೇದಿಕೆ ಹಂಚಿಕೊಂಡಿರುವ ಚಿತ್ರ ಬಹಿರಂಗವಾಗಿದೆ.

ದಿಫಾ-ಎ-ಪಾಕಿಸ್ತಾನ್ ಕೌನ್ಸಿಲ್ ಏರ್ಪಡಿಸಿದ ಸರ್ವಪಕ್ಷ ಸಮ್ಮೇಳನವೊಂದರಲ್ಲಿ ಪಾಕಿಸ್ತಾನದ ಧಾರ್ಮಿಕ ವ್ಯವಹಾರಗಳು ಮತ್ತು ಧಾರ್ಮಿಕ ಸಾಮರಸ್ಯ ಸಚಿವ ನೂರುಲ್ ಹಕ್ ಕಾದ್ರಿ ಮಾತನಾಡುತ್ತಿದ್ದಾಗ ಅವರ ಪಕ್ಕದಲ್ಲೇ ಹಫೀಝ್ ಸಯೀದ್ ಕುಳಿತುಕೊಂಡಿರುವುದನ್ನು ಚಿತ್ರ ತೋರಿಸುತ್ತದೆ.

ಅಷ್ಟೇ ಅಲ್ಲದೆ, ಹಿಂಭಾಗದಲ್ಲಿರುವ ಹಾಕಲಾಗಿರುವ ಬ್ಯಾನರ್‌ನಲ್ಲಿ, ‘ಪಾಕಿಸ್ತಾನದ ರಕ್ಷಣೆಗಾಗಿ ಸಮ್ಮೇಳನವನ್ನು ಏರ್ಪಡಿಸಲಾಗುತ್ತಿದೆ’ ಎಂಬುದಾಗಿ ಬರೆಯಲಾಗಿದೆ ಹಾಗೂ ‘ಕಾಶ್ಮೀರ’ ಹಾಗೂ ‘ಭಾರತದ ಬೆದರಿಕೆಗಳು’ ಎಂಬುದಾಗಿಯೂ ಬರೆಯಲಾಗಿದೆ.

ದಿಫಾ-ಎ-ಪಾಕಿಸ್ತಾನ್ ಕೌನ್ಸಿಲ್ ಎನ್ನುವುದು ತೀವ್ರವಾದಿ ನೀತಿಗಳನ್ನು ಪ್ರತಿಪಾದಿಸುವ ಪಾಕಿಸ್ತಾನದ 40ಕ್ಕೂ ಅಧಿಕ ರಾಜಕೀಯ ಮತ್ತು ಧಾರ್ಮಿಕ ಪಕ್ಷಗಳ ಒಕ್ಕೂಟವಾಗಿದೆ. ಅದರ ಸಭೆಯಲ್ಲಿ ಕಾದ್ರಿಯ ಹಾಜರಾತಿಯು, ಪಾಕಿಸ್ತಾನವು ಭಯೋತ್ಪಾದನೆಯ ಆತಿಥೇಯ ಮತ್ತು ಪೋಷಕ ಎಂಬುದಾಗಿ ವಿಶ್ವಸಂಸ್ಥೆಯಲ್ಲಿ ಭಾರತ ಮಾಡಿರುವ ಆರೋಪಗಳನ್ನು ಸಾಬೀತುಪಡಿಸಿದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News