×
Ad

ಅ.8: ಪಂಪ್‌ವೆಲ್ ಮೇಲ್ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಧರಣಿ

Update: 2018-10-01 23:00 IST

ಮಂಗಳೂರು, ಅ.1: ಪಂಪ್‌ವೆಲ್, ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲು ಹೆದ್ದಾರಿ ಅವ್ಯವಸ್ಥೆಯನ್ನು ಸರಿಪಡಿಸಲು ಹಾಗೂ ಸರ್ವಿಸ್ ರಸ್ತೆಗಳ ನಿರ್ಮಾಣಕ್ಕಾಗಿ, ನಂತೂರು ಮೇಲ್ಸೇತುವೆ ನಿರ್ಮಿಸಲು ಒತ್ತಾಯಿಸಿ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಅ.8ರಂದು ಬೆಳಗ್ಗೆ 10ಕ್ಕೆ ಪಂಪ್‌ವೆಲ್ ಮೇಲ್ಸೇತುವೆ ಬಳಿಯಲ್ಲಿ ಸಾಮೂಹಿ ಧರಣಿ ಜರುಗಲಿದೆ ಎಂದು ಪಂಪ್‌ವೆಲ್ ಮೇಲ್ಸೇತುವೆ ಹೋರಾಟ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.

ಮಂಗಳೂರಿನ ಹೃದಯಭಾಗವಾದ ಪಂಪುವೆಲ್‌ನಲ್ಲಿ ಈ ಹಿಂದೆ ಇದ್ದ ಸರ್ಕಲ್ ಭಾರೀ ಹೆಸರುವಾಸಿಯಾಗಿತ್ತು. ಹೊರರಾಜ್ಯ, ಜಿಲ್ಲೆಗಳಿಂದ ಬರುವಂತಹ ಪ್ರಯಾಣಿಕರಿಗೆ ಪಂಪುವೆಲ್ ಸರ್ಕಲ್ ಗುರುತಿನ ಕೇಂದ್ರವಾಗಿತ್ತು. ಇಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮೇಲ್ಸೇತುವೆ ಕಾಮಗಾರಿ ಆರಂಭಗೊಂಡು 8 ವರ್ಷಗಳು ಕಳೆದಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಹೆದ್ದಾರಿ ಪ್ರಾಧಿಕಾರದ ಬೇಜವಾಬ್ದಾರಿತನ, ಗುತ್ತಿಗೆ ಕಂಪೆನಿಗಳ ಕಳಪೆ ನಿರ್ವಹಣೆ, ಅವೈಜ್ಞಾನಿಕ ಕಾಮಗಾರಿ, ಜನಪ್ರತಿನಿಧಿಗಳ ನಿರ್ಲಕ್ಷದಿಂದ ಮೇಲ್ಸೇತುವೆ ಪೂರ್ಣಗೊಂಡಿಲ್ಲ. ಜೊತೆಗೆ ಸರ್ವಿಸ್ ರಸ್ತೆಗಳಿಲ್ಲದೆ ವಾಹನಗಳು ಹಾಗೂ ಪ್ರಯಾಣಿಕರು ಪರದಾಡುವಂತಾಗಿದೆ. ಇಂತಹ ಭಾರೀ ಸಮಸ್ಯೆಗಳಿಂದಾಗಿ ಪಂಪುವೆಲ್‌ನಲ್ಲಿ ಈಗಾಗಲೇ ಅನೇಕ ಜೀವಗಳು ಹಾನಿಯಾಗಿದ್ದು, ಮಾತ್ರವಲ್ಲದೆ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಕಳೆದ 8 ವರ್ಷಗಳ ಅವಧಿಯಲ್ಲಿ ಹಲವು ಮಂದಿ ವಾಹನ ಸವಾರರು ಜೀವವನ್ನು ಕಳೆದುಕೊಂಡಿರುತ್ತಾರೆ. ನಂತೂರಿನಲ್ಲಿ ಕೂಡಾ ಅವೈಜ್ಞಾನಿಕ ರಸ್ತೆಯಿಂದಾಗಿ ಅನೇಕ ಜೀವಗಳು ಬಲಿಯಾಗಿದೆ. ಇಲ್ಲಿ ಕೂಡಾ ಮೇಲ್ಸೇತುವೆ ನಿರ್ಮಾಣ ಕೆಲಸ ಪ್ರಾರಂಭಗೊಂಡಿಲ್ಲ. ಒಟ್ಟಿನಲ್ಲಿ ತಲಪಾಡಿಯಿಂದ ಕುಂದಾಪುರದವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್‌ಗೇಟ್ ಸಮಸ್ಯೆ, ಅಪೂರ್ಣ ಮೇಲ್ಸೇತುವೆ, ಸರ್ವಿಸ್ ರಸ್ತೆಗಳ ದುರವಸ್ಥೆ, ಹೆದ್ದಾರಿ ಅವ್ಯವಸ್ಥೆ ಸಹಿತ ಅನೇಕ ಸಮಸ್ಯೆಗಳನ್ನು ಉಭಯ ಜಿಲ್ಲೆಗಳ ಜನತೆ ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಅನುಭವಿಸುತ್ತಿದ್ದಾರೆ ಎಂದು ಸಮಿತಿಯ ಸಂಚಾಲಕ ಸುನೀಲ್‌ ಕುಮಾರ್ ಬಜಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News