×
Ad

ದ.ಕ.ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಆರಂಭ: ಡಿಸಿ ಸಸಿಕಾಂತ್ ಸೆಂಥಿಲ್

Update: 2018-10-01 23:00 IST

422 ಗ್ರಾಮಗಳ ಬೆಳೆ ಸಮೀಕ್ಷೆಗೆ 1,250 ಮಂದಿಯ ನಿಯೋಜನೆ

ಮಂಗಳೂರು, ಅ.1: ದ.ಕ.ಜಿಲ್ಲೆಯ 422 ಗ್ರಾಮಗಳಲ್ಲಿ ಪ್ರಸಕ್ತ ಸಾಲಿನ ಮುಂಗಾರು ಬೆಳೆ ಸಮೀಕ್ಷೆಯನ್ನು ಮೊಬೈಲ್ ಆ್ಯಪ್‌ನೊಂದಿಗೆ 1,250 ಖಾಸಗಿ ನಿವಾಸಿಗಳ ಮೂಲಕ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಜಿಲ್ಲೆಯ ಜನತೆ ಇದಕ್ಕೆ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮನವಿ ಮಾಡಿದ್ದಾರೆ.

ದ.ಕ.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಬಾರಿ ಬೆಳೆ ಸಮೀಕ್ಷೆಯನ್ನು ಗ್ರಾಮಲೆಕ್ಕಿಗರ ಮೂಲಕ ಕೈಗೊಳ್ಳಲಾಗಿತ್ತು. ಎರಡು ತಿಂಗಳ ಕಾಲ ಅವರಿಗೆ ಬೇರೆ ಕರ್ತವ್ಯ ನಿರ್ವಹಿಸಲು ಅಡ್ಡಿಯಾಗಿತ್ತು. ಇದರಿಂದ ಗ್ರಾಮದ ಜನತೆಗೂ ತುಂಬಾ ಸಮಸ್ಯೆಯಾಗಿತ್ತು. ಹಾಗಾಗಿ ಈ ಬಾರಿ ಆಯಾ ಗ್ರಾಮದಿಂದಲೇ ಖಾಸಗಿ ವ್ಯಕ್ತಿಗಳನ್ನು ಬೆಳೆ ಸಮೀಕ್ಷೆಗಾಗಿ ನಿಯೋಜಿಸಲಾಗಿದೆ. ಪ್ರತಿ ಸರ್ವೆ ನಂಬರಿನ ಸಮೀಕ್ಷೆಗೆ ತಲಾ 10 ರೂ.ನಂತೆ ಸಂಭಾವನೆಯನ್ನು ಈ ಖಾಸಗಿ ನಿವಾಸಿಗಳಿಗೆ ಸರಕಾರದಿಂದಲೇ ನೀಡಲಾಗುವುದು. ಸೆ.28ರಿಂದಲೇ ಬೆಳೆ ಸಮೀಕ್ಷೆ ಆರಂಭಗೊಂಡಿದ್ದು, ಈ ತಿಂಗಳೊಳಗೆ ಸಮೀಕ್ಷೆ ಪೂರ್ಣಗೊಳ್ಳಲಿದೆ. ಸಮೀಕ್ಷೆಗಾಗಿ ಮನೆ ಮನೆಗೆ ಆಗಮಿಸಿದಾಗ ಜಮೀನಿನ ಮಾಲಕರು ಸಹಕಾರ ನೀಡಬೇಕು. ಸರ್ವೆ ನಂಬರಿನ ನಿವೇಶನದಲ್ಲಿನ ಬೆಳೆ ವಿವರ ದಾಖಲಿಸಲು ಮತ್ತು ಫೊಟೊ ತೆಗೆಯಲು ಅವಕಾಶ ಕಲ್ಪಿಸಬೇಕು. ಇದಕ್ಕೆ ಮಾಲಕರು ಯಾವುದೇ ಹಣ ನೀಡಬೇಕಾಗಿಲ್ಲ, ಮೊಬೈಲ್ ಸಂಖ್ಯೆ ನೀಡಬೇಕು ಎಂದರು.

ಬೆಳೆ ಸಮೀಕ್ಷೆ ನಡೆಸುವುದರಿಂದ ಎಷ್ಟು ವಿಸ್ತೀರ್ಣದಲ್ಲಿ, ಯಾವ ಕೃಷಿಯನ್ನು ಬೆಳೆಯಲಾಗಿದೆ ಎನ್ನುವುದು ಖಚಿತವಾಗಲಿದೆ. ಯಾವುದೇ ಪ್ರದೇಶದಲ್ಲಿ ಪ್ರಕೃತಿ ವಿಕೋಪದಿಂದ ನಷ್ಟವಾದರೆ ಅದನ್ನು ಅಂದಾಜಿಸಬಹುದು. ಯಾವ ಬೆಳೆ ಇಳಿಮುಖವಾಗಿದೆ? ಯಾವುದು ಹೊಸದಾಗಿ ಬೆಳೆಯಲಾಗುತ್ತಿದೆ ಎಂಬ ಮಾಹಿತಿ ಕೂಡಾ ಇದರಿಂದ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪಹಣಿ ಮತ್ತು ರೈತರ ಸರ್ವೆ ನಂಬರಿನಲ್ಲಿ ಯಾವ ಬೆಳೆ ಬೆಳೆದಿದೆಯೋ ಆ ಬೆಳೆಯ ಹೆಸರು ಮತ್ತು ವಿಸ್ತೀರ್ಣ ಸರಿಯಾಗಿ ನಮೂದಾಗುತ್ತದೆ. ಬೆಳೆ ವಿಮೆಯಲ್ಲಿ ಬೆಳೆಯ ಸಮರ್ಪಕ ವಿಸ್ತೀರ್ಣ ಸಿಗುವುದರಿಂದ ರೈತರಿಗೆ ವಿಮಾ ಪರಿಹಾರದಲ್ಲಿ ಕಡಿತವಾಗುವ ಸಾಧ್ಯತೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್ ಉಪಸ್ಥಿತರಿದ್ದರು.

ಕೂಳೂರು ಸೇತುವೆ ಬಂದ್

ಕೂಳೂರಿನಲ್ಲಿ ಫಲ್ಗುಣಿ ನದಿಗೆ ಅಡ್ಡವಾಗಿ ಹೊಸ ಸೇತುವೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸಲಿದೆ. ಅದಕ್ಕಾಗಿ ಹಳೆಯ ಸೇತುವೆ (ಇಕ್ಕೆಲಗಳಲ್ಲಿ ಕಮಾನು ಇರುವ ಸೇತುವೆ)ಯನ್ನು ಶೀಘ್ರ ಬಂದ್ ಮಾಡಲಾಗುವುದು. ಹಳೆಯ ಸೇತುವೆ ಬಳಕೆಗೆ ಯೋಗ್ಯವಲ್ಲ ಎಂದು ತಜ್ಞರು ವರದಿ ನೀಡಿದ ಹಿನ್ನೆಲೆಯಲ್ಲಿ ಅದನ್ನು ಬಂದ್ ಮಾಡಲಾಗುವುದು. ಆ ಬಳಿಕ ಇನ್ನೊಂದು ಸೇತುವೆಯಲ್ಲಿ ವಾಹನಗಳು ಸಂಚರಿಸಲಿವೆ, ಇವೆರಡು ಸೇತುವೆ ಮಧ್ಯೆ ಹೊಸ ಸೇತುವೆಯನ್ನು ನಿರ್ಮಿಸುವ ಕೆಲಸ ಕೈಗೆತ್ತಿಕೊಳ್ಳಲಾಗುವುದು.

ತುಂಬೆ ಡ್ಯಾಮ್‌ನಿಂದ ಮರಳು

ಹಲವು ವರ್ಷಗಳಿಂದ ತುಂಬೆ ಅಣೆಕಟ್ಟೆಯಲ್ಲಿ ಮರಳು, ಹೂಳು ತುಂಬಿಕೊಂಡಿದೆ. ಅದನ್ನು ಹೊರತೆಗೆಯಲು ಕೇಂದ್ರ ಸರಕಾರ ಕೂಡಾ ಅನುಮತಿ ನೀಡಿದೆ. ಈ ಮರುಳನ್ನು ನಗರದ ಅಗತ್ಯಕ್ಕೆ ಪೂರೈಸಲು ನಿರ್ಧರಿಸಲಾಗಿದೆ. ಡ್ಯಾಂನಲ್ಲಿ ತುಂಬಿದ ಹೂಳನ್ನು ತೆಗೆಯದಿದ್ದರೆ ಹತ್ತಿರದ ಗ್ರಾಮಗಳಲ್ಲಿ ನೆರೆಭೀತಿ ಉಂಟಾಗಬಹುದು.

ಬೆಥಮೆಟ್ರಿ ಸರ್ವೆ ಪೂರ್ಣ

ಸಿಆರ್‌ಝಡ್ ಪ್ರದೇಶದಲ್ಲಿ ಮರಳು ತೆಗೆಯುವುದಕ್ಕಾಗಿ ಬೆಥಮೆಟ್ರಿ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಮೀನುಗಾರರ ಅಭಿಪ್ರಾಯವನ್ನೂ ಪಡೆಯಲಾಗಿದೆ. ಮುಂದಿನ ಹಂತದಲ್ಲಿ ಎನ್‌ಐಟಿಕೆ ತಜ್ಞರು ವರದಿ ನೀಡಲಿದ್ದಾರೆ. ಬಳಿಕ ರಾಜ್ಯಮಟ್ಟದಲ್ಲಿ ಅನುಮೋದನೆ ಪಡೆದು ಸಿಆರ್‌ಝಡ್ ಪ್ರದೇಶದಲ್ಲಿ ದೋಣಿಗಳ ಓಡಾಟಕ್ಕೆ ಅನುಕೂಲವಾಗುವಂತೆ ಮರಳಿನ ದಿಣ್ಣೆಗಳನ್ನು ತೆರವು ಮಾಡಲು ಅವಕಾಶ ಕಲ್ಪಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News