×
Ad

ಬಾಲ್ಯ ವಿವಾಹ ನಿಷೇಧ ಕಾಯ್ದೆ ಪರಿಣಾಮಕಾರಿ ಜಾರಿ ಅಗತ್ಯ: ನ್ಯಾ. ಕಡ್ಲೂರು ಸತ್ಯನಾರಾಯಣ ಆಚಾರ್ಯ

Update: 2018-10-02 18:34 IST

ಮಂಗಳೂರು, ಅ.2: ಬಾಲ್ಯವಿವಾಹಕ್ಕೆ ಬಡತನವೊಂದೇ ಕಾರಣವಲ್ಲ. ಸಮಾಜದ ಪರಿಸ್ಥಿತಿಯೂ ಕಾರಣವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಮನೆಯೊಳಗೆ ಎಷ್ಟೇ ರಕ್ಷಣೆ ಒದಗಿಸಿದರೂ ಕೂಡಾ ಸಮಾಜದಲ್ಲಿ ಅವರಿಗೆ ರಕ್ಷಣೆ ಸಿಗುತ್ತಿಲ್ಲ. ಹಾಗಾಗಿ ಮಕ್ಕಳ ರಕ್ಷಣೆಯ ನಿಟ್ಟಿನಲ್ಲಿ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದ ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣ ಆಚಾರ್ಯ ಹೇಳಿದರು.

ದ.ಕ.ಜಿಲ್ಲಾಡಳಿತ, ದ.ಕ.ಜಿಪಂ, ಜಿಲ್ಲಾ ನ್ಯಾಯಾಂಗ ಅಭಿಯೋಜನಾ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006, ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಕಾಯ್ದೆ 2016 ಮತ್ತು ಬಾಲ್ಯ ವಿವಾಹ ನಿಷೇಧ ಕರ್ನಾಟಕ ನಿಯಮಾವಳಿಗಳು 2014ರ ಕುರಿತು ನ್ಯಾಯಾಧೀಶರು, ಸರಕಾರಿ ಅಭಿಯೋಜಕರು ಮತ್ತು ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ ಮಂಗಳವಾರ ನಗರದ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕರಾವಳಿಯಲ್ಲಿ ಈ ಪಿಡುಗು ಗಂಭೀರವಾಗಿಲ್ಲದಿದ್ದರೂ ಕೂಡಾ ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ವ್ಯಾಪಕವಾಗಿದೆ. ಅಲ್ಲಿ ಹೆಚ್ಚಿನ ಮಕ್ಕಳು ಶಾಲೆಗೆ ಹೋಗುವ ಪರಿಸ್ಥಿತಿಯಲ್ಲಿಲ್ಲ. 7ನೇ ತರಗತಿ ಬಳಿಕ ಮನೆಯಲ್ಲೇ ಉಳಿಯುತ್ತಿದ್ದರು. ಹೆತ್ತವರು ಬೆಳಗ್ಗಿನಿಂದ ಸಂಜೆವರೆಗೆ ಹೊಲದಲ್ಲಿ ದುಡಿಯುತ್ತಿರುವ ಸಂದರ್ಭ ಮನೆಯಲ್ಲಿರುವ ಹೆಣ್ಮಕ್ಕಳು ದೌರ್ಜನ್ಯದ ಸಂತ್ರಸ್ತರಾಗುತ್ತಿದ್ದರು. ಇದನ್ನು ತಪ್ಪಿಸಲು ಹೆತ್ತವರು ಪ್ರಾಪ್ತ ವಯಸ್ಕರಾಗುವ ಮೊದಲೇ ಮಕ್ಕಳಿಗೆ ಮದುವೆ ಮಾಡಿಬಿಡುತ್ತಿದ್ದರು ಎಂದ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣ ಆಚಾರ್ಯ ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ನಡುವೆ ಹೊಂದಾಣಿಕೆ ಇರಬೇಕು. ಜತೆಗೆ ಸಮಾಜವೂ ಈ ನಿಟ್ಟಿನಲ್ಲಿ ಜವಾಬ್ದಾರಿ ವಹಿಸಬೇಕು ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ ದ.ಕ.ಜಿಲ್ಲೆಯಲ್ಲಿ ಬಾಲ್ಯವಿವಾಹಗಳ ಸಂಖ್ಯೆ ಕ್ಷೀಣಿಸಿದ್ದರೂ ಕೂಡಾ ಪೂರ್ತಿಯಾಗಿ ಈ ಪಿಡುಗು ನಿಂತಿಲ್ಲ. ಪ್ರಸಕ್ತ ವರ್ಷದ ಆಗಸ್ಟ್‌ವರೆಗೆ ಯಾವುದೇ ಪ್ರಕರಣ ದಾಖಲಾಗದಿದ್ದರೂ ಕೂಡ ಬಾಲ್ಯ ವಿವಾಹಕ್ಕೆ ಮುಂದಾಗಿದ್ದ 5 ಪ್ರಕರಣಗಳನ್ನು ಪತ್ತೆಹಚ್ಚಿ ತಡೆಯೊಡ್ಡಲಾಗಿತ್ತು ಎಂದರು.

ತೆರೆಮರೆಯಲ್ಲಿ ಬಾಲ್ಯವಿವಾಹ ನಡೆಸಲು ಯತ್ನಿಸಲಾಗುತ್ತಿದೆ. ಈ ಪಿಡುಗು ತಡೆಗಟ್ಟಲು ಜಿಲ್ಲೆ, ತಾಲೂಕು, ಗ್ರಾಮ ಮಟ್ಟಗಳಲ್ಲಿ ಸಮಿತಿ ರಚನೆ ಮಾಡಿ ಅವರಿಗೆ ತರಬೇತಿಯನ್ನೂ ನೀಡಲಾಗಿದೆ. ಹಲವು ವಿಧಾನಗಳ ಮೂಲಕ ಜನಜಾಗೃತಿಯನ್ನೂ ಮೂಡಿಸಲಾಗುತ್ತಿದೆ ಎಂದು ಸುಂದರ ಪೂಜಾರಿ ನುಡಿದರು.
ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮಾತನಾಡಿ, ಸಂವಿಧಾನವನ್ನು ಒಪ್ಪಿಕೊಂಡು ಇಷ್ಟು ವರ್ಷಗಳಾದರೂ ಬಾಲ್ಯವಿವಾಹ ನಿಷೇಧಕ್ಕೆ ಇನ್ನೂ ಕಷ್ಟಪಡುತ್ತಿರುವುದು ವಿಷಾದದ ಸಂಗತಿ. ಕೆಲವೊಮ್ಮೆ ಇಂಥ ಪ್ರಕರಣಗಳು ಕಂಡುಬಂದರೂ ಅವರ ವೈಯಕ್ತಿಕ ಹಿನ್ನೆಲೆಯನ್ನು ಗಮನಿಸಿ ಬಿಟ್ಟುಬಿಡುವ ಸಾಧ್ಯತೆಗಳೂ ಇವೆ. ಹೀಗೆ ಮಾಡಿದರೆ ಸಮಾಜದ ಹಿತಕ್ಕೆ ಹಾನಿಯಾಗುತ್ತದೆ. ಆದ್ದರಿಂದ ಇಂತಹ ಪ್ರಕರಣಗಳ ಆರೋಪಿಗಳನ್ನು ಸಹಾನುಭೂತಿಯಿಂದ ನೋಡುವುದನ್ನು ಬಿಟ್ಟು ಕಾನೂನು ಪಾಲನೆ ಮಾಡುವ ಕುರಿತು ಇಲಾಖೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಅಭಿಯೋಜನಾ ಇಲಾಖೆಯ ಹಿರಿಯ ಕಾನೂನು ಅಧಿಕಾರಿ ಶಿವಪ್ರಸಾದ್ ಆಳ್ವ ಕೆ., ಸಿವಿಲ್ ನ್ಯಾಯಾಧೀಶ ಹರೀಶ್, ಎಸಿಪಿ ಮಂಜುನಾಥ ಶೆಟ್ಟಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಮಲ್ಲನಗೌಡ ಪಾಟೀಲ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿಸೋಜ ಉಪಸ್ಥಿತರಿದ್ದರು.

ಬಾಲ್ಯವಿವಾಹ ಮುಸ್ಲಿಮರಲ್ಲೇ ಹೆಚ್ಚು

ಮುಸ್ಲಿಮ್ ಸಮುದಾಯಗಳಲ್ಲಿ ಈಗಲೂ ಹೆಚ್ಚು ಬಾಲ್ಯವಿವಾಹಗಳು ನಡೆಯುತ್ತಿವೆ. ಬಹುತೇಕ ಪ್ರಕರಣಗಳು ಹೊರ ಜಗತ್ತಿಗೆ ಗೊತ್ತಾಗದಂತೆ ನಡೆಯುತ್ತಿವೆ. ಈ ಮಾತನ್ನು ಬಹಳ ಖಾರವಾಗಿಯೇ ಹೇಳಬೇಕಾಗಿದೆ ಎಂದು ನ್ಯಾಯಾಧೀಶ ಸೂರ್ಯನಾರಾಯಣ ಆಚಾರ್ಯ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News