ಪ್ರತಿಪಕ್ಷಗಳು ರಾಮಮಂದಿರವನ್ನು ವಿರೋಧಿಸುವಂತಿಲ್ಲ: ಭಾಗವತ್
Update: 2018-10-02 19:23 IST
ಹರಿದ್ವಾರ,ಅ.2: ದೇಶದ ಹೆಚ್ಚಿನ ಜನರು ಶ್ರೀರಾಮನ ಭಕ್ತರಾಗಿರುವುದರಿಂದ ಪ್ರತಿಪಕ್ಷಗಳು ಸಹ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಬಹಿರಂಗವಾಗಿ ವಿರೋಧಿಸುವಂತಿಲ್ಲ ಎಂದು ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್ ಹೇಳಿದ್ದಾರೆ.
ಸೋಮವಾರ ಇಲ್ಲಿಯ ಪತಂಜಲಿ ಯೋಗಪೀಠದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು,ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆರೆಸ್ಸೆಸ್ ಮತ್ತು ಬಿಜೆಪಿ ಬದ್ಧವಾಗಿವೆ,ಆದರೆ ಕೆಲವು ವಿಷಯಗಳು ಸಮಯವನ್ನು ತೆಗೆದುಕೊಳ್ಳುತ್ತವೆ. ಅಧಿಕಾರದಲ್ಲಿ ಯಾರು ಇರುತ್ತಾರೆ ಎನ್ನುವುದು ಮುಖ್ಯ ಮತ್ತು ಒಳ್ಳೆಯ ಕೆಲಸಗಳನ್ನು ಮಾಡುವ ಸರಕಾರ ಅಧಿಕಾರದಲ್ಲಿರಬೇಕು ಎಂದು ಹೇಳಿದರು.
ಪ್ರತಿಯೊಂದೂ ಸರಕಾರವು ತನ್ನ ಮಿತಿಗಳನ್ನು ಹೊಂದಿದೆ ಮತ್ತು ಅದು ಆ ಮಿತಿಗಳಲ್ಲಿಯೇ ಕಾರ್ಯ ನಿರ್ವಹಿಸಬೇಕಾಗುತ್ತದೆ. ಆದರೆ ಸಾಧು-ಸಂತರಿಗೆ ಇಂತಹ ಯಾವುದೇ ನಿರ್ಬಂಧಗಳಿಲ್ಲ ಮತ್ತು ಅವರು ಧರ್ಮ,ದೇಶ ಮತ್ತು ಸಮಾಜದ ಏಳಿಗೆಗಾಗಿ ಕೆಲಸ ಮಾಡಬೇಕು ಎಂದರು.