×
Ad

ಉದ್ದೇಶಿತ ಉಪವಾಸ ಮುಷ್ಕರ ಕೈಬಿಟ್ಟ ಅಣ್ಣಾ ಹಜಾರೆ

Update: 2018-10-02 19:26 IST

 ರಾಲೆಗಣ ಸಿದ್ಧಿ(ಮಹಾರಾಷ್ಟ್ರ),ಅ.2: ಲೋಕಪಾಲ ನೇಮಕ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಮಹಾತ್ಮಾ ಗಾಂಧಿಯವರ ಜನ್ಮದಿನವಾದ ಮಂಗಳವಾರ ಇಲ್ಲಿ ಆರಂಭಿಸಲು ಉದ್ದೇಶಿಸಿದ್ದ ತನ್ನ ಉಪವಾಸ ಸತ್ಯಾಗ್ರಹವನ್ನು ಕೈಬಿಟ್ಟಿರುವ ಸಾಮಾಜಿಕ ಕಾರ್ಯಕರ್ತ ಹಾಗೂ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಝಾರೆ ಅವರು,ಸರಕಾರವು ಕೈಗೊಂಡಿರುವ ಕೆಲವು ಕ್ರಮಗಳು ಆಶಾಕಿರಣವನ್ನು ಮೂಡಿಸಿವೆ ಎಂದು ಹೇಳಿದ್ದಾರೆ.

ಆದರೆ,ಸರಕಾರವು ತನ್ನ ಬೇಡಿಕೆಗಳನ್ನು ಈಡೇರಿಸಲು ವಿಫಲಗೊಂಡರೆ ಮಹಾತ್ಮಾ ಗಾಂಧಿಯವರ ಪುಣ್ಯತಿಥಿಯಾದ ಜ.30ರಿಂದ ತಾನು ದೇಶವ್ಯಾಪಿ ಪ್ರತಿಭಟನೆಯನ್ನು ಆರಂಭಿಸುವುದಾಗಿ ಅವರು ಎಚ್ಚರಿಕೆ ನೀಡಿದರು.

ಮಾರ್ಚ್‌ನಲ್ಲಿ ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ತನ್ನ ಪ್ರತಿಭಟನೆಯ ಬಳಿಕ ತನ್ನ ಬೇಡಿಕೆಗಳಿಗೆ ಸಂಬಂಧಿಸಿದಂತೆ ಧನಾತ್ಮಕ ಕ್ರಮಗಳನ್ನು ಕೈಗೊಳ್ಳುವ ತನ್ನ ಮಾತನ್ನು ಸರಕಾರವು ಉಳಿಸಿಕೊಂಡಿಲ್ಲ ಎಂದು ಈ ಹಿಂದೆ ಆರೋಪಿಸಿದ್ದ ಹಝಾರೆ,ಅ.2ರಿಂದ ಉಪವಾಸ ಸತ್ಯಾಗ್ರಹವನ್ನು ಆರಂಭಿಸುವುದಾಗಿ ಪ್ರಕಟಿಸಿದ್ದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳ ಪರವಾಗಿ ಹಝಾರೆಯವರನ್ನು ಭೇಟಿಯಾದ ಮಹಾರಾಷ್ಟ್ರ ಸಚಿವ ಗಿರೀಶ ಮಹಾಜನ ಅವರು,ಬೇಡಿಕೆಗಳ ಕುರಿತು ಸರಕಾರವು ವಿವರವಾಗಿ ಚರ್ಚಿಸಿದೆ ಮತ್ತು ಪ್ರಮಖ ಬೇಡಿಕೆಗಳನ್ನು ಈಡೇರಿಸಿದೆ ಎಂದು ತಿಳಿಸಿದರಲ್ಲದೆ,ಪ್ರತಿಭಟನೆಯನ್ನು ರದ್ದುಗೊಳಿಸುವಂತೆ ಅವರನ್ನು ಆಗ್ರಹಿಸಿದ್ದರು.

ಕೆಲವು ವಿಷಯಗಳಲ್ಲಿ ಧನಾತ್ಮಕತೆ ಕಂಡು ಬರುತ್ತಿದೆ. ಲೋಕಪಾಲ ಮತ್ತು ಲೋಕಾಯುಕ್ತ ನೇಮಕಗಳ ಬಗ್ಗೆ ಸರಕಾರವು ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ರೈತರಿಗೆ ಒಂದೂವರೆ ಪಟ್ಟು ಬೆಲೆಗಳನ್ನು ಘೋಷಿಸಿದೆ. ಆಶಾಕಿರಣವೊಂದು ಕಂಡು ಬಂದಿದೆ. ಹೀಗಾಗಿ ಸದ್ಯಕ್ಕೆ ಪ್ರತಿಭಟನೆಯನ್ನು ಕೈಬಿಡಲು ನಿರ್ಧರಿಸಿದ್ದೇನೆ ಎಂದು ಹಝಾರೆ ತಿಳಿಸಿದರು.

ಲೋಕಪಾಲ ಮತ್ತು ಲೋಕಾಯುಕ್ತ ನೇಮಕಗಳ ಜೊತೆಗೆ ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನಕ್ಕೂ ಹಝಾರೆ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News