ಆರ್‌ಟಿಐ ವ್ಯಾಪ್ತಿಗೆ ಬಿಸಿಸಿಐ: ಸಿಐಸಿ ತೀರ್ಪನ್ನು ಪ್ರಶ್ನಿಸಲು ಪದಾಧಿಕಾರಿಗಳ ನಿರ್ಧಾರ

Update: 2018-10-02 14:05 GMT

ಹೊಸದಿಲ್ಲಿ,ಅ.2: ತನ್ನನ್ನು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪಿಗೆ ಸೇರಿಸಿರುವ ಕೇಂದ್ರ ಮಾಹಿತಿ ಆಯೋಗ(ಸಿಐಸಿ)ದ ತೀರ್ಪನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸುವ ಸಾಧ್ಯತೆಗಳಿವೆ. ಈ ವಿಷಯವನ್ನು ನಿರ್ವಹಿಸುವಲ್ಲಿ ಆಡಳಿತ ಸಮಿತಿ(ಸಿಒಎ)ಯು ಉದ್ದೇಶಪೂರ್ವಕ ನಿರ್ಲಕ್ಷವನ್ನು ತೋರಿಸಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೋರ್ವರು ಆರೋಪಿಸಿದ್ದಾರೆ.

ತಾನು ಸ್ವಾಯತ್ತ ಸಂಸ್ಥೆ ಎಂದು ಪ್ರತಿಪಾದಿಸಿರುವ ಬಿಸಿಸಿಐ,ಆರ್‌ಟಿಐ ವ್ಯಾಪ್ತಿಗೆ ಸೇರಿಸಿರುವುದಕ್ಕೆ ತೀವ್ರ ಅಸಮಾಧಾನಗೊಂಡಿದೆ. ಮಂಡಳಿಗೆ ಆಗಿರುವ ಹಿನ್ನಡೆಗೆೆ ಸಿಒಎ ಕಾರಣವೆಂದು ಅದು ದೂರಿದೆ.

 ಸಿಐಸಿ ಆದೇಶದ ಕಾನೂನು ಪರಿಣಾಮಗಳ ಕುರಿತು ಮಾತನಾಡಿದ ಹಿರಿಯ ಬಿಸಿಸಿಐ ಅಧಿಕಾರಿಯೋರ್ವರು,ವಕೀಲರನ್ನು ನೇಮಿಸಿಕೊಳ್ಳುವ ಮಂಡಳಿಯ ಹಕ್ಕು ನಷ್ಟಗೊಳ್ಳಲು ಸಿಒಎ ಉದ್ದೇಶಪೂರ್ವಕ ನಿರ್ಲಕ್ಷವು ಕಾರಣವಾಗಿದೆ ಎಂದು ಆರೋಪಿಸಿದರು.

ಆರ್‌ಟಿಐ ಕಾಯ್ದೆಯಡಿ ಮಾಹಿತಿಗಳನ್ನು ಕೋರುವ ಅರ್ಜಿಗಳನ್ನು ಸ್ವೀಕರಿಸಲು 15 ದಿನಗಳಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್ ವ್ಯವಸ್ಥೆಗಳನ್ನು ರೂಪಿಸುವಂತೆ ಸಿಐಸಿ ಬಿಸಿಸಿಐಗೆ ನಿರ್ದೇಶ ನೀಡಿದೆ.

ಜುಲೈ 10ರಂದು ಸಿಐಸಿ ವಿಚಾರಣೆಯಿತ್ತು ಮತ್ತು ಅದು ಬಿಸಿಸಿಐನ್ನು ಆರ್‌ಟಿಐ ವ್ಯಾಪ್ತಿಗೆ ಏಕೆ ಸೇರಿಸಬಾರದು ಎನ್ನುವುದಕ್ಕೆ ಕಾರಣವನ್ನು ಕೋರಿ ಅದು ನೋಟಿಸ್ ಜಾರಿಗೊಳಿಸಿತ್ತು. ಬಿಸಿಸಿಐ ಇದಕ್ಕೆ ಉತ್ತರವನ್ನೂ ಸಲ್ಲಿಸಿರಲಿಲ್ಲ ಮತ್ತು ಶೋ-ಕಾಸ್ ನೋಟಿಸನ್ನೂ ಮೂಲೆಗುಂಪು ಮಾಡಿತ್ತು. ಸಿಐಸಿ ಆದೇಶವನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸುವುದು ಈಗ ಉಳಿದಿರುವ ಏಕೈಕ ಮಾರ್ಗವಾಗಿದೆ ಎಂದು ಅಧಿಕಾರಿ ತಿಳಿಸಿದರು.

ವಿನೋದ ರಾಯ್ ಮತ್ತು ಡಯಾನಾ ಎಡುಲ್ಜಿ ಅವರನ್ನೊಳಗೊಂಡಿರುವ ಸಿಒಎ ಚುನಾವಣೆಗಳ ಪ್ರಕಟಣೆಗೆ ಮುನ್ನ ಮಂಡಳಿಯ ಕುತ್ತಿಗೆಗೆ ಆರ್‌ಟಿಐ ಹೊರೆಯನ್ನು ಕಟ್ಟಬಹುದು ಎಂದು ಹೇಳಿದ ಇನ್ನೋರ್ವ ಅಧಿಕಾರಿ,ಬಿಸಿಸಿಐ ಭಾಗಶಃ ಆರ್‌ಟಿಐ ವ್ಯಾಪ್ತಿಗೆ ಸೇರಲು ಬಯಸಿದೆ ಮತ್ತು ತಂಡದ ಆಯ್ಕೆಯಂತಹ ಮಾಹಿತಿಗಳನ್ನು ಬಹಿರಂಗಗೊಳಿಸದಿರಲು ಬಯಸಿದೆ ಎಂದು ನಾವು ಕೇಳಿದ್ದೇವೆ. ಇದೇನು ತಮಾಷೆಯೇ? ಬಿಸಿಸಿಐ ತೀರ್ಪನ್ನು ಪ್ರಶ್ನಿಸಿದರೆ ಅದು ಸಾರಾಸಗಟಾಗಿರುತ್ತದೆ ಎಂದರು.

ಬಿಸಿಸಿಐ ಆರ್‌ಟಿಐ ವ್ಯಾಪ್ತಿಗೊಳಪಟ್ಟರೆ ತಂಡದ ಆಯ್ಕೆ ಪದ್ಧತಿಗಳು,ಐಪಿಎಲ್ ಫ್ರಾಂಚೈಸಿಗಳು ಅದರಲ್ಲಿ ಪಾತ್ರಗಳನ್ನು ಹೊಂದಿವೆಯೇ,ಶೇರ್ ಹೋಲ್ಡಿಂಗ್ ಸ್ವರೂಪ ಮತ್ತು ಹೂಡಿಕೆಗಳು ಇತ್ಯಾದಿಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇಂತಹ ಕಠಿಣ ಪ್ರಶ್ನೆಗಳಿಗೆ ಉತ್ತರ ಕೊಡಲು ಸಿಒಎ ಸಿದ್ಧವಿದೆಯೇ ಎನ್ನುವುದು ನಮಗೂ ಖಚಿತವಿಲ್ಲ. ಅಲ್ಲದೆ ಕಾನೂನು ಕ್ರಮಗಳನ್ನು ಕೈಗೊಳ್ಳುವ ಅಧಿಕಾರಗಳನ್ನು ಪದಾಧಿಕಾರಿಗಳಿಗೆ ನೀಡಬೇಕು.ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಸಿಒಎ ದುರ್ಬಳಕೆ ಮಾಡಿಕೊಳ್ಳುತ್ತಿರವುದು ದುರದೃಷ್ಟಕರವಾಗಿದೆ ಎಂದರು.

ಮಂಡಳಿಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಲು ಸಿಒಎ ಬದ್ಧವಾಗಿದೆ ಎಂದು ರಾಯ್ ಹೇಳಿದರು. ಆದರೆ ಸಿಐಸಿ ಆದೇಶದ ಕುರಿತು ಯಾವುದೇ ನೇರ ಹೇಳಿಕೆಯನ್ನು ನೀಡಲಿಲ್ಲ.

ಸಿಐಸಿ ಆದೇಶದ ಮುಂದುವರಿಕೆಯಾಗಿ ಪಾರದರ್ಶಕತೆಯನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಮತ್ತು ಅದಕ್ಕಾಗಿ ವೆಬ್‌ಸೈಟ್ ರೂಪದಲ್ಲಿ ಬಲವಾದ ವೇದಿಕೆಯನ್ನು ಸೃಷ್ಟಿಸಿದ್ದೇವೆ ಎಂದು ಹೇಳಲು ಬಯಸುತ್ತೇವೆ. ಇದರ ಮೂಲಕ ನಾವು ನಮ್ಮ ಪ್ರಕ್ರಿಯೆಗಳು ಮತ್ತು ನಿರ್ಧಾರಗಳನ್ನು ಸಾರ್ವಜನಿಕಗೊಳಿಸುತ್ತಿದ್ದೇವೆ ಎಂದರು. ರಾಯ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಸಿಸಿಐ ಅಧಿಕಾರಿ,ಅವರು ಪಾರದರ್ಶಕತೆಯ ಬಗ್ಗೆ ತುಂಬ ಮಾತನಾಡುತ್ತಾರೆ. ಆದರೆ ಈ ಉದ್ದೇಶ ಕೃತಿಯಲ್ಲಿ ಕಂಡುಬರುತ್ತಿಲ್ಲ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News