ಸೂ ಕಿಯ ಕೃತ್ಯಗಳು ವಿಷಾದನೀಯ, ಆದರೆ ಪ್ರಶಸ್ತಿ ವಾಪಸ್ ಪಡೆಯುವುದಿಲ್ಲ: ನೊಬೆಲ್ ಪ್ರತಿಷ್ಠಾನ ಮುಖ್ಯಸ್ಥ

Update: 2018-10-02 16:31 GMT

ಸ್ಟಾಕ್‌ಹೋಮ್ (ಸ್ವೀಡನ್), ಅ. 2: ಮ್ಯಾನ್ಮಾರ್‌ನ ನಾಗರಿಕ ಸರಕಾರದ ನಾಯಕಿಯಾಗಿ ಆಂಗ್ ಸಾನ್ ಸೂ ಕಿ ತೆಗೆದುಕೊಂಡಿರುವ ಕ್ರಮಗಳು 'ವಿಷಾದನೀಯ', ಆದರೆ ಅವರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಹಿಂದಕ್ಕೆ ಪಡೆದುಕೊಳ್ಳಲಾಗುವುದಿಲ್ಲ ಎಂದು ನೊಬೆಲ್ ಪ್ರತಿಷ್ಠಾನ ಮುಖ್ಯಸ್ಥ ಲಾರ್ಸ್ ಹೇಕಿನ್‌ಸ್ಟನ್ ಹೇಳಿದ್ದಾರೆ.

ಅವರು ಶುಕ್ರವಾರ ಸ್ಟಾಕ್‌ಹೋಮ್‌ನಲ್ಲಿ 'ರಾಯ್ಟರ್ಸ್' ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 ಪ್ರಶಸ್ತಿಗಳನ್ನು ವಿತರಿಸಿದ ಬಳಿಕ ಸಂಭವಿಸಿದ ವಿದ್ಯಮಾನಗಳಿಗೆ ಪ್ರತಿಕ್ರಿಯೆಯಾಗಿ ಪ್ರಶಸ್ತಿಗಳನ್ನು ಹಿಂದಕ್ಕೆ ಪಡೆಯುವುದರಲ್ಲಿ ಅರ್ಥವಿಲ್ಲ, ಆದರೆ, ಫಲಾನುಭವಿಗಳ ಅರ್ಹತೆ ಬಗ್ಗೆ ಆಯ್ಕೆಗಾರರು ನಿರಂತರವಾಗಿ ಚರ್ಚಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ರೊಹಿಂಗ್ಯಾ ಮುಸ್ಲಿಮರ 'ಜನಾಂಗೀಯ ಹತ್ಯೆ' ನಡೆಸುವ ಉದ್ದೇಶದಿಂದ ಮ್ಯಾನ್ಮಾರ್ ಸೇನೆಯು ಅವರ ವಿರುದ್ಧ ಬೃಹತ್ ದಮನ ಕಾರ್ಯಾಚರಣೆ ನಡೆಸಿದೆ ಎಂಬುದಾಗಿ ವಿಶ್ವಸಂಸ್ಥೆಯ ತನಿಖೆಗಾರರು ಆಗಸ್ಟ್‌ನಲ್ಲಿ ಸಲ್ಲಿಸಿದ ವರದಿಯಲ್ಲಿ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

ಸೇನೆಯ ದಮನ ಕಾರ್ಯಾಚರಣೆಗೆ ಬೆದರಿ 7 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವಕ್ಕಾಗಿ ನಡೆಸಿದ ಚಳವಳಿಗಾಗಿ 1991ರಲ್ಲಿ ಸೂ ಕಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿತ್ತು.

ಈಗ ಅವರು ಮ್ಯಾನ್ಮಾರ್‌ನ ನಾಗರಿಕ ಸರಕಾರದ ಮುಖ್ಯಸ್ಥೆಯಾಗಿದ್ದಾರೆ.

ಆದರೆ, ಅವರದೇ ದೇಶದ ನಾಗರಿಕರನ್ನು ರಕ್ಷಿಸಲು 'ನೈತಿಕ ಪ್ರಭಾವ'ವನ್ನು ಬಳಸಲು ಅವರು ವಿಫಲರಾಗಿದ್ದಾರೆ ಎಂಬುದಾಗಿ ವಿಶ್ವಸಂಸ್ಥೆಯ ವರದಿ ಆರೋಪಿಸಿದೆ.

''ಅವರು ಮ್ಯಾನ್ಮಾರ್‌ನಲ್ಲಿ ಏನು ಮಾಡುತ್ತಿದ್ದಾರೆ ಎನ್ನುವುದನ್ನು ನಾವು ನೋಡುತ್ತಿದ್ದೇವೆ. ಇದರ ಬಗ್ಗೆ ಅವರನ್ನು ಹಲವು ಬಾರಿ ಪ್ರಶ್ನಿಸಲಾಗಿದೆ. ನಾವು ಮಾನವಹಕ್ಕುಗಳ ಪರವಾಗಿ ನಿಲ್ಲುತ್ತೇವೆ. ಅದು ನಮ್ಮ ಮಹತ್ವದ ಮೌಲ್ಯಗಳ ಪೈಕಿ ಒಂದು'' ಲಾರ್ಸ್ ಹೇಕಿನ್‌ಸ್ಟನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News