ಭಾರತ ಬಹುಪಕ್ಷೀಯತೆಯ ಆಧಾರ ಸ್ತಂಭ: ಗುಟೆರಸ್

Update: 2018-10-02 17:07 GMT

ಹೊಸದಿಲ್ಲಿ, ಅ.2: ಭಾರತವು ಬಹುಪಕ್ಷೀಯತೆಯ ಸ್ತಂಭವಾಗಿದ್ದು ಭಾರತದ ಉಪಯುಕ್ತ ಪಾತ್ರವಿಲ್ಲದೆ ಬಹುಧ್ರುವದ ವಿಶ್ವವನ್ನು ನಿರ್ಮಿಸಲು ಸಾಧ್ಯವಾಗದು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಹೇಳಿದ್ದಾರೆ.

   ಮೂರು ದಿನಗಳ ಭೇಟಿಗಾಗಿ ಭಾರತಕ್ಕೆ ಸೋಮವಾರ ಆಗಮಿಸಿರುವ ಗುಟೆರಸ್, ಭಾರತದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ವಿಶ್ವಸಂಸ್ಥೆಯ ಸಹಕಾರದ ಅಗತ್ಯವಿದೆ ಎಂದು ಹೇಳಿದರು. ರಾಜ್‌ಘಾಟ್‌ನಲ್ಲಿರುವ ಮಹಾತ್ಮಾ ಗಾಂಧೀಜಿ ಸ್ಮಾರಕಕ್ಕೆ ತೆರಳಿ ಗಾಂಧೀಜಿಗೆ ಶ್ರದ್ಧಾಂಜಲಿ ಸಲ್ಲಿಸಿದ ಅವರು, ಸಮಸ್ಯೆಯಿಂದ ತುಂಬಿರುವ ವಿಶ್ವಕ್ಕೆ ಮಹಾನ್ ಆತ್ಮವಾಗಿ ಹಾಗೂ ಮಾನವೀಯತೆಯ ಬೆಳಕಾಗಿ ಗಾಂಧೀಜಿ ದಾರಿ ತೋರುವವರಾಗಿದ್ದಾರೆ ಎಂದರು.

ಭಯೋತ್ಪಾದನೆಯನ್ನು ಪ್ಲೇಗ್‌ನಂತಹ ಮಹಾಮಾರಿಗೆ ಹೋಲಿಸಿದ ಅವರು, ಅಹಿಂಸಾ ಮಾರ್ಗದಲ್ಲಿ ಗಾಂಧಿ ಇಟ್ಟಿದ್ದ ನಂಬಿಕೆ ಮತ್ತು ವಿಶ್ವಾಸ ಇಂದಿನ ಸಂದರ್ಭಕ್ಕೆ ಅತ್ಯಂತ ಪ್ರಸ್ತುತವಾಗಿದೆ . ಅಹಿಂಸಾ ಮಾರ್ಗದ ಮೂಲಕ ಶಾಂತಿಯ ಪ್ರಕ್ರಿಯೆಯನ್ನು ಮುಂದುವರಿಸಿಕೊಂಡು ಹೋಗಬೇಕಿದೆ ಎಂದರು . ಈ ಮಧ್ಯೆ, ಕಾಶ್ಮೀರದ ವಿವಾದವನ್ನು ತ್ವರಿತವಾಗಿ ಇತ್ಯರ್ಥಪಡಿಸುವ ವಿಷಯದ ಬಗ್ಗೆ ಗುಟೆರಸ್ ಅವರ ಗಮನ ಸೆಳೆಯಲು ತಾವು ‘ಜಂಟಿ ಪ್ರತಿರೋಧ ನಾಯಕತ್ವ ’ ಎಂಬ ಸಂಘಟನೆಯ ಹೆಸರಿನಡಿ ಅವರಿಗೆ ಪತ್ರ ಬರೆದಿರುವುದಾಗಿ ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News