×
Ad

ನೆಕ್ಕಿಲಾಡಿ ಗ್ರಾ.ಪಂ.ನ ಜನರೇಟರ್ ನಾಪತ್ತೆ: ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆ

Update: 2018-10-02 23:04 IST

ಉಪ್ಪಿನಂಗಡಿ, ಅ. 2: 34 ನೇ ನೆಕ್ಕಿಲಾಡಿಯ ಗ್ರಾಮ ಪಂಚಾಯತ್ ಕಚೇರಿಯಲ್ಲಿದ್ದ ಜನರೇಟರ್ ನಾಪತ್ತೆಯಾಗಿರುವ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿ, ಮುಂದಿನ ತಿಂಗಳ ಸಭೆಗೆ ಮುನ್ನ ಜನರೇಟರ್ ಇಲ್ಲಿರದಿದ್ದರೆ ಸರಕಾರಿ ಸೊತ್ತು ದುರುಪಯೋಗ ಮಾಡಿದ ಬಗ್ಗೆ ತಪ್ಪಿತಸ್ಥರ ವಿರುದ್ಧ ದೂರು ನೀಡುವುದಾಗಿ ಎಚ್ಚರಿಸಿದ ಘಟನೆ ನಡೆದಿದೆ.

34ನೇ ಗ್ರಾ.ಪಂ. ಅಧ್ಯಕ್ಷೆ ರತಿ ಎಸ್. ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ಗ್ರಾ.ಪಂ. ಸದಸ್ಯೆಯೋರ್ವರು ವಿಷಯ ಪ್ರಸ್ತಾಪಿಸಿ, ಕಚೇರಿಯ ಉಪಯೋಗಕ್ಕೆಂದು ಗ್ರಾ.ಪಂ. ಕಚೇರಿಯಲ್ಲಿದ್ದ ಜನರೇಟರ್ ಒಂದು ವರ್ಷದಿಂದ ನಾಪತ್ತೆಯಾಗಿದೆ. ಪ್ರಶ್ನಿಸಿದಾಗಲೆಲ್ಲಾ ಒಂದಲ್ಲ ಒಂದು ನೆಪಗಳು ಕೇಳಿ ಬರುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಗ್ರಾ.ಪಂ. ಪ್ರಭಾರ ಪಿಡಿಒ ಚಂದ್ರಾವತಿ ಮಾತನಾಡಿ, ತಾನು ಅಧಿಕಾರ ಸ್ವೀಕರಿಸಿದಾಗ ಈ ಜನರೇಟರ್ ಅನ್ನು ಗ್ರಾ.ಪಂ. ದಾಖಲೆಯಲ್ಲಿ ತೋರಿಸಿಲ್ಲ. ಈ ಕಾರಣದಿಂದ ಈ ಬಗ್ಗೆ ತಿಳಿಯಲು ಅಸಾಧ್ಯವಾಗಿದೆ ಎಂದರು. ಈ ವೇಳೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ಅಸ್ಕರ್ ಅಲಿ, ಜನರೇಟರ್ ತಾಂತ್ರಿಕ ತೊಂದರೆಗೆ ಸಿಲುಕಿದ್ದರಿಂದ ಅದನ್ನು ರಿಪೇರಿಗೆ ಕೊಡಲಾಗಿದೆ ಎಂದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು, ದುರಸ್ತಿಗೆ ಒಂದು ವರ್ಷ ಕಾಲಾವಧಿ ಬೇಕೆ ? ಸರಕಾರಿ ಸೊತ್ತನ್ನು ಈ ರೀತಿ ಎಲ್ಲೆಂದರಲ್ಲಿ ಇಡುವುದು ಸರಿಯಲ್ಲ. ಮುಂದಿನ ಸಾಮಾನ್ಯ ಸಭೆಯೊಳಗೆ ಜನರೇಟರ್ ಅನ್ನು ಪಂಚಾಯತ್ ಕಚೇರಿಗೆ ತರಲೇ ಬೇಕು. ಇಲ್ಲದಿದ್ದಲ್ಲಿ ತಪ್ಪಿತಸ್ಥರ ವಿರುದ್ಧ ಸರಕಾರಿ ಸೊತ್ತು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.

ಗ್ರಾಮದ ಬೀದಿದೀಪಗಳ ನಿರ್ವಹಣೆ ಸಮರ್ಪಕವಾಗಿರಲು ಹಳೆ ವಿದ್ಯುತ್ ತಂತಿಗಳ ಬದಲಾಯಿಸಲು ಕೋರಿ ಮೆಸ್ಕಾಂಗೆ ಪತ್ರ ಬರೆಯಲು ನಿರ್ಣಯಿಸಲಾಯಿತು. ರಾಷ್ಟ್ರೀಯ ಹೆದ್ದಾರಿ ಚತುಷ್ಪಥಕ್ಕಾಗಿ ಭೂ ಸ್ವಾಧೀನವಾದ ಪಂಚಾಯತ್ ಭೂಮಿಗೆ ಲಭಿಸಿದ 27 ಲಕ್ಷ ರೂ. ಹಣದಿಂದ ಸುಸಜ್ಜಿತ ವಾಣಿಜ್ಯ ಕಟ್ಟಡ ಹಾಗೂ ಮೀನು ಮಾರುಕಟ್ಟೆಯನ್ನು ನಿರ್ಮಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ತಾ.ಪಂ. ಸದಸ್ಯೆ ಸುಜಾತ ಕೃಷ್ಣ ಆಚಾರ್ಯ, ಪಂಚಾಯತ್ ಉಪಾಧ್ಯಕ್ಷ ಅಸ್ಕರಾಲಿ,  ಸದಸ್ಯರಾದ ರೇವತಿ, ಮೈಕಲ್ ವೇಗಸ್, ಯಮುನಾ, ಪ್ರಶಾಂತ್, ಕೃಷ್ಣವೇಣಿ,  ಜ್ಯೋತಿ, ಶೇಖಬ್ಬ, ಸತ್ಯವತಿ,  ಬಾಬು ನಾಯ್ಕ್ ಉಪಸ್ಥಿತರಿದ್ದರು. ಪಿಡಿಒ ಚಂದ್ರಾವತಿ ಕಾರ್ಯಕ್ರಮ ಸ್ವಾಗತಿಸಿ, ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News