ನ್ಯಾಯಾಧೀಶರ ವೇತನ, ನಿವೃತ್ತಿ ವಯಸ್ಸು ಹೆಚ್ಚಳ ಬೇಡಿಕೆಗೆ ಎಜಿ ಬೆಂಬಲ

Update: 2018-10-02 17:48 GMT

ಹೊಸದಿಲ್ಲಿ, ಅ.2: ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 62ರಿಂದ 65 ವರ್ಷಕ್ಕೆ ಹೆಚ್ಚಿಸಬೇಕೆಂಬ ಒತ್ತಾಯಕ್ಕೆ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಬೆಂಬಲ ಸೂಚಿಸಿದ್ದಾರೆ.

ನಿರ್ಗಮನ ಸಿಜೆಐ ದೀಪಕ್ ಮಿಶ್ರಾ ಅವರ ಗೌರವಾರ್ಥ ಸೋಮವಾರ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ನ್ಯಾಯಾಧೀಶರಿಗೆ ಈಗ ನೀಡುತ್ತಿರುವ ವೇತನ ವಕೀಲರ ತಿಂಗಳ ಸರಾಸರಿ ಸಂಪಾದನೆಗಿಂತಲೂ ಕಡಿಮೆಯಿದೆ. ಆದ್ದರಿಂದ ವೇತನವನ್ನು 2ರಿಂದ 3 ಪಟ್ಟು ಹೆಚ್ಚಿಸಬೇಕು ಎಂದರು. ನಿವೃತ್ತರಾದ ಬಳಿಕ ನ್ಯಾಯಾಧೀಶರು ಯಾವುದೇ ಹುದ್ದೆಯನ್ನು ಒಪ್ಪಿಕೊಳ್ಳಬಾರದು ಎಂಬ ವಾದಕ್ಕೆ ತಮ್ಮ ಸಹಮತವಿಲ್ಲ. ನ್ಯಾಯಾಧೀಶರ ಅನುಭವ ವ್ಯರ್ಥವಾಗಬಾರದು ಎಂದು ವೇಣುಗೋಪಾಲ್ ಹೇಳಿದರು.

ಭಾರತದಲ್ಲಿ ಸರಾಸರಿ ಜೀವಿತಾವಧಿ 73 ವರ್ಷವಾಗಿದೆ. ಹೀಗಿರುವಾಗ ಹೈಕೋರ್ಟ್ ನ್ಯಾಯಾಧೀಶರು 62 ವರ್ಷಕ್ಕೆ ಹಾಗೂ ಸುಪ್ರೀಂಕೋರ್ಟ್ ನ್ಯಾಯಾಧೀಶರು 65ಕ್ಕೆ ನಿವೃತ್ತರಾಗಿ ಬಳಿಕ ಯಾವುದೇ ಹುದ್ದೆಯನ್ನು ಒಪ್ಪಿಕೊಳ್ಳದೆ ನಿಷ್ಕ್ರಿಯರಾಗಿರಬೇಕೇ. ಸುಪ್ರೀಂಕೋರ್ಟ್‌ನ ಆವರಣದಲ್ಲಿ ಓಡಾಡುವ ವಕೀಲರನ್ನೇ ಗಮನಿಸಿ. ಇವರಲ್ಲಿ ಹೆಚ್ಚಿನವರು 62 ಅಥವಾ 65 ವರ್ಷ ಮೀರಿದವರು ಆಗಿದ್ದಾರೆ. 65 ವರ್ಷ ದಾಟಿದ ವಕೀಲರು ವಾದ ಮಂಡಿಸಲು ಸಾಧ್ಯವಾಗುವುದಾದರೆ ನ್ಯಾಯಾಧೀಶರಿಗೆ ಯಾಕೆ ಇದು ಸಾಧ್ಯವಿಲ್ಲ ಎಂದು ವೇಣುಗೋಪಾಲ್ ಪ್ರಶ್ನಿಸಿದರು.

ಕಳೆದ ಕೆಲ ತಿಂಗಳಲ್ಲಿ ಸಿಜೆಐ ದಾಖಲೆ ಪ್ರಮಾಣದಲ್ಲಿ ತೀರ್ಪು ನೀಡಿರುವುದನ್ನು ಉಲ್ಲೇಖಿಸಿದ ಅವರು, ಹಲವು ಬಾರಿ ಲಿಂಗ ನ್ಯಾಯದ ಕುರಿತ ಪ್ರಕರಣಗಳನ್ನು ಅವರು ನಿರ್ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದಿನಪತ್ರಿಕೆಗಳಲ್ಲಿ ಅವರನ್ನು ಲಿಂಗಯೋಧ ಎಂದು ಹೆಸರಿಸಲಾಗಿತ್ತು ಎಂದು ವಿನೋದವಾಗಿ ನುಡಿದರು. ದೇಶದಲ್ಲಿ ಈಗಿರುವ ನ್ಯಾಯನಿರ್ಣಯ ಪ್ರಕ್ರಿಯೆ ಸುದೀರ್ಘಾವಧಿಯದ್ದಾಗಿದೆ. ವಿಚಾರಣಾ ನ್ಯಾಯಾಲಯದಲ್ಲಿ 10 ವರ್ಷ, ಹೈಕೋರ್ಟ್‌ನಲ್ಲಿ 10 ವರ್ಷ, ಸುಪ್ರೀಂಕೋರ್ಟ್‌ನಲ್ಲಿ 10 ವರ್ಷ- ಹೀಗೆ ಪ್ರಕರಣವೊಂದು ಇತ್ಯರ್ಥವಾಗಬೇಕಿದ್ದರೆ 30 ವರ್ಷ ಬೇಕಾಗುತ್ತದೆ. ಆಗ ನ್ಯಾಯಕೋರಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿ ಬದುಕಿರುವ ಸಾಧ್ಯತೆಯೂ ಕಡಿಮೆ ಇರುತ್ತದೆ. ಸರಕಾರ ಮತ್ತು ನ್ಯಾಯಾಧೀಶರು ಸಭೆ ನಡೆಸಿ, ವಿಚಾರವಿಮರ್ಶೆ ನಡೆಸಿ ಕ್ಷಿಪ್ರ ನ್ಯಾಯತೀರ್ಮಾನದ ವ್ಯವಸ್ಥೆ ರೂಪಿಸಬೇಕು ಎಂದು ವೇಣುಗೋಪಾಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News