×
Ad

ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವವರಿಗೆ ಹೋರಾಟ: ಕೋಟ

Update: 2018-10-03 19:28 IST

ಉಡುಪಿ, ಅ.3: ರಾಜ್ಯದಲ್ಲಿ ಎರಡು ಲಕ್ಷ ಸರಕಾರಿ ನೌಕರರಿದ್ದು, ಸರಕಾರ ಜಾರಿಗೆ ತಂದಿರುವ ಹೊಸ ಪಿಂಚಣಿ ಯೋಜನೆಯಲ್ಲಿ ಯಾವುದೇ ಭದ್ರತೆ ಇಲ್ಲ. ಆದುದರಿಂದ ರಾಜ್ಯ ಸರಕಾರ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕು. ಅಲ್ಲಿಯವರೆಗೆ ಸಂಘದ ಪರವಾಗಿ ನಿಂತು ಹೋರಾಟ ನಡೆಸ ಲಾಗುವುದು ಎಂದು ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘ ಉಡುಪಿ ಜಿಲ್ಲಾ ಘಟಕ, ತಾಲೂಕು ಘಟಕ, ಜಿಲ್ಲಾಸ್ಪತ್ರೆ ಮತ್ತು ಜಿಲ್ಲಾ ರಕ್ತನಿಧಿಯ ಸಹಯೋಗ ದೊಂದಿಗೆ ಬುಧವಾರ ಅಜ್ಜರಕಾಡು ಪುರಭವನದ ಮಿನಿ ಹಾಲ್‌ನಲ್ಲಿ ಹಮ್ಮಿ ಕೊಳ್ಳಲಾದ ‘ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ರಕ್ತದಾನ ಶಿಬಿರ ಸೇವಾ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಪಶ್ಚಿಮ ಬಂಗಾಳ ಹಾಗೂ ತ್ರಿಪುರ ರಾಜ್ಯದಲ್ಲಿ ಹಿಂದಿನ ಹಳೆಯ ಪಿಂಚಣಿ ಯೋಜನೆಯನ್ನೇ ಜಾರಿಗೊಳಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಸರಕಾರ ಮಾಡಿಲ್ಲ. ಇದರ ವಿರುದ್ದ ಸದನದಲ್ಲಿ ಧ್ವನಿ ಎತ್ತಲಾಗುವುದು ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಸಂಘದ ಜಿಲ್ಲಾಧ್ಯಕ್ಷ ರಾಘವ ಶೆಟ್ಟಿ, ಜಿಲ್ಲಾ ಗೌರವ ಸಲಹೆಗಾರ ಪ್ರಶಾಂತ್ ಶೆಟ್ಟಿ, ಜಿಲ್ಲಾ ಸಂಚಾಲಕ ರವಿ ಎಸ್.ಪೂಜಾರಿ, ರಕ್ತನಿಧಿ ವೈದ್ಯಾಧಿಕಾರಿ ಡಾ.ವೀಣಾ, ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಲಯನ್ಸ್ ಕ್ಲಬ್‌ನ ವಿ.ಜಿ.ಶೆಟ್ಟಿ, ಶಶಿಧರ್ ಶೆಟ್ಟಿ ಮೊದ ಲಾದವರು ಉಪಸ್ಥಿತರಿದ್ದರು.

ಸಂಘದ ತಾಲೂಕು ಅಧ್ಯಕ್ಷ ರವಿಕುಮಾರ್ ಸ್ವಾಗತಿಸಿದರು. ಜಿಲ್ಲಾ ಕಾರ್ಯ ದರ್ಶಿ ರಾಮಚಂದ್ರ ವಾಕುಡ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News