ಕಲ್ಯಾಣಪುರ: ಅ. 6ರಿಂದ ರಾಜ್ಯ ಮಟ್ಟದ ಟೇಬಲ್ ಟೆನಿಸ್ ಪಂದ್ಯಾಟ

Update: 2018-10-03 14:03 GMT

ಉಡುಪಿ, ಅ.3: ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಬ್ರಹ್ಮಾವರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆ ಕಲ್ಯಾಣಪುರ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ಟೇಬಲ್ ಟೆನಿಸ್ ಪಂದ್ಯಾಟ ಅ.6ರಿಂದ 8ರವರೆಗೆ ಕಲ್ಯಾಣಪುರದ ಮಿಲಾಗ್ರಿಸ್ ವಿದ್ಯಾಸಂಸ್ಥೆಯಲ್ಲಿ ನಡೆಯಲಿದೆ.

ಕಲ್ಯಾಣಪುರ ಮಿಲಾಗ್ರಿಸ್ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕರಾದ ವಂ. ಲಾರೆನ್ಸ್ ಡಿಸೋಜಾ ಅವರು ಇಂದು ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಪಂದ್ಯಾಟದ ಉದ್ಘಾಟನೆ ಕಲ್ಯಾಣಪುರದ ಮಿಲಾಗ್ರಿಸ್ ಚರ್ಚ್‌ನ ತ್ರಿಶತಮಾನೋತ್ಸವ ಸಭಾಂಗಣದಲ್ಲಿ ಅ.6ರ ಶನಿವಾರ ಸಂಜೆ 4:30ಕ್ಕೆ ನಡೆಯಲಿದ್ದು, ಇದಕ್ಕೆ ಮೊದಲು ಅಪರಾಹ್ನ 3:15ಕ್ಕೆ ಸಂತೆಕಟ್ಟೆಯಿಂದ ಶಾಲೆಯವರೆಗೆ ಅದ್ದೂರಿಯ ಮೆರವಣಿ ನಡೆಯಲಿದೆ ಎಂದರು.

ಮೂರು ದಿನಗಳ ಕಾಲ ನಡೆಯುವ ಪಂದ್ಯಾಟದ ಕುರಿತು ವಿವರಣೆ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷ ಮಧುಕರ್ ಎಸ್. ಅವರು, ಪ್ರಾಥಮಿಕ ಶಾಲಾ ಬಾಲಕ-ಬಾಲಕಿಯರು ಹಾಗೂ ಪ್ರೌಢ ಶಾಲಾ ಬಾಲಕ-ಬಾಲಕಿಯರ ತಂಡಗಳು ಇದರಲ್ಲಿ ಪಾಲ್ಗೊಳ್ಳಲಿವೆ. ಪ್ರತಿ ವಿಭಾಗದಲ್ಲಿ ರಾಜ್ಯದ ತಲಾ 34 ತಂಡಗಳು ಪಾಲ್ಗೊಳ್ಳಲಿವೆ ಎಂದರು.

ಪಂದ್ಯಾಟದಲ್ಲಿ 950ಕ್ಕೂ ಅಧಿಕ ಕ್ರೀಡಾಪಟುಗಳು, ಅಧಿಕಾರಿಗಳು ಹಾಗೂ ಕ್ರೀಡಾ ಅಧಿಕಾರಿಗಳು ಪಾಲ್ಗೊಳ್ಳುವರು. ಪಂದ್ಯಗಳು ನಾಕೌಟ್ ಮಾದರಿಯಲ್ಲಿ ನಡೆಯಲಿವೆ. ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳಿವೆ. ಕೊನೆಯ ದಿನ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ರಾಜ್ಯ ವನ್ನು ಪ್ರತಿನಿಧಿಸಿ ಆಡುವ ಕರ್ನಾಟಕ ತಂಡಗಳು ಆಯ್ಕೆ ಮಾಡಲಾಗುವುದು. ಈ ತಂಡಗಳು ಉತ್ತರಪ್ರದೇಶದ ಆಗ್ರಾದಲ್ಲಿ ನವೆಂಬರ್ ತಿಂಗಳಲ್ಲಿ ನಡೆಯುವ ರಾಷ್ಟ್ರ ಮಟ್ಟದ ಟೇಬಲ್‌ ಟೆನಿಸ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ ಎಂದು ಮಧುಕರ್ ವಿವರಿಸಿದರು.

ಪಂದ್ಯಾಟವನ್ನು ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಉದ್ಘಾಟಿಸುವರು. ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆ ವಹಿಸುವರು.ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರು ಆಶೀರ್ವಚನ ನೀಡಲಿದ್ದಾರೆ ಎಂದು ವಂ.ಲಾರೆನ್ಸ್ ಡಿಸೋಜ ತಿಳಿಸಿದರು.

ಅ.7ರಂದು ಸಂಜೆ 4:30ರಿಂದ 9:30ರವರೆಗೆ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲಾ ವಠಾರದಲ್ಲಿ ವಿಶೇಷ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಕೊಂಕಣಿ ಚಲನಚಿತ್ರ ನಟಿ ಶಾಲಾ ಹಳೆ ವಿದ್ಯಾರ್ಥಿನಿ ರೆನ್ಸಿಟ ಡಿಸೋಜ, ಮತ್ತೊಬ್ಬ ಹಳೆ ವಿದ್ಯಾರ್ಥಿನಿ ಖ್ಯಾತ ಗಾಯಕಿ ಗಾರ್ಗಿ ಶಬರಾಯ, ಬಿಗ್ ಬಾಸ್ ಖ್ಯಾತಿಯ ಸುಕ್ರತಾ ವಾಗ್ಳೆ ಭಾಗವಹಿಸುವರು.

ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭ ಅ.8ರ ಅಪರಾಹ್ನ 3:30ಕ್ಕೆ ಕಲ್ಯಾಣಪುರ ಮಿಲಾಗ್ರಿಸ್ ಕೆಥೆಡ್ರಲ್‌ನ ಧರ್ಮಗುರುಗಳಾದ ವಂ.ಡಾ.ಲಾರೆನ್ಸ್ ಡಿಸೋ ವಹಿಸಲಿದ್ದಾರೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸೇರಿದಂತೆ ಗಣ್ಯರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘಟನಾ ಸಮಿತಿ ಅಧ್ಯಕ್ಷ ಹಾಗೂ ಮುಖ್ಯೋಪಾಧ್ಯಾಯರಾದ ವಂ.ಲ್ಯಾನ್ಸಿ ಫೆರ್ನಾಂಡೀಸ್ ಎಸ್.ಜೆ., ಮುಖ್ಯೋಪಾದ್ಯಾಯಿನಿ ವೀರಾ ಡಿಸಿಲ್ವ, ದೈಹಿಕ ಶಿಕ್ಷಣ ಶಿಕ್ಷಕ ವಿನ್ಸೆಂಟ್ ಮಸ್ಕರೇನಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News